

ಗೌರಿಬಿದನೂರು : ನಗರ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದ್ದು, ಬೆಳವಣಿಗೆಯ ವೇಗಕ್ಕೆ ತಕ್ಕಂತೆ ನಗರವನ್ನು ಅಭಿವೃದ್ಧಿಪಡಿಸಲು ಆದ್ಯತೆ ನೀಡಲಾಗುವುದು ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು.
ನಗರೋತ್ಥಾನ ಯೋಜನೆಯಡಿ 90 ಲಕ್ಷ ರೂ.ವೆಚ್ಚದ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿ, ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಿರುವುದರಿಂದ ಪ್ರತಿ ವರ್ಷ 25 ಕೋಟಿ ರೂ. ಅನುದಾನ ಹರಿದು ಬರಲಿದೆ. ಆ ಅನುದಾನದ ಮೂಲಕ ನಗರದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಜನತೆ ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸಬೇಕು. ನಗರ ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದರು.
ನಗರಸಭೆ ಆಯುಕ್ತ ಜಿ.ಎನ್. ಚಲಪತಿ ಮಾತನಾಡಿ, ನಗರಸಭೆ ವ್ಯಾಪ್ತಿಗೆ ಒಳಪಟ್ಟಿರುವ ಹಳ್ಳಿಗಳಲ್ಲಿ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಹಂತ ಹಂತವಾಗಿ ಆದ್ಯತೆ ನೀಡಲಾಗುವುದು. ಸಾರ್ವಜನಿಕರು ಸಕಾಲದಲ್ಲಿ ತೆರಿಗೆ ಪಾವತಿಸಬೇಕು ಎಂದು ಕೋರಿದರು.ನಗರಸಭಾ ಸದಸ್ಯರಾದ ವಿ. ರಮೇಶ್, ರಾಜಕುಮಾರ್, ಅಭಿಯಂತರ ಚಕ್ರಪಾಣಿ, ಮುಖಂಡರಾದ ಎ. ಅಶ್ವತ್ಥಪ್ಪ, ಕೆ. ವೆಂಕಟ್, ಎಲ್.ಸುನಿಲ್ ಮತ್ತಿತರರಿದ್ದರು.