ಅಭಿವೃದ್ಧಿ ಕಾರ್ಯಗಳಿಗೆ ಗ್ರಹಣ

5 srt 2 pattan panchayiti
Published on

ಶಿರಹಟ್ಟಿ: ಸ್ಥಳೀಯ ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆದು ಬರೋಬ್ಬರಿ ಒಂದೂವರೆ ವರ್ಷ ಗತಿಸಿ ಸದಸ್ಯರಾಗಿ ಆಯ್ಕೆಯಾದವರಿಗೆ ಇನ್ನೂ ಅಧಿಕಾರ ಭಾಗ್ಯ ದೊರೆತಿಲ್ಲ. ಹೀಗಾಗಿ, ಪಟ್ಟಣದ ಅಭಿವೃದ್ಧಿ ಕಾರ್ಯಗಳಿಗೆ ಗ್ರಹಣ ಹಿಡಿದಂತಾಗಿದೆ.

ಮುಖ್ಯಾಧಿಕಾರಿಯಿಂದ ಹಿಡಿದು ಸಿಬ್ಬಂದಿ ವರ್ಗದವರು ಸರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲವಾದ್ದರಿಂದ ತಮ್ಮ ಕೆಲಸ ಕಾರ್ಯಗಳಿಗೆ ಪ.ಪಂ.ಗೆ ಬರುವ ಸಾರ್ವಜನಿಕರು ಹಿಡಿಶಾಪ ಹಾಕುವಂತಾಗಿದೆ.

ಪಟ್ಟಣದಲ್ಲಿನ ಹೈಮಾಸ್ಟ್ ದೀಪಗಳ ನಿರ್ವಹಣೆ ಕಳೆದೊಂದು ವರ್ಷದಿಂದ ಸವಾಲಾಗಿ ಪರಿಣಮಿಸಿದೆ. ಇದರಿಂದ ವಿವಿಧ ಬಡಾವಣೆಗಳ ನಾಗರಿಕರು ಕಗ್ಗತ್ತಲಿನಲ್ಲಿಯೇ ಸಂಚರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

20 ಸಾವಿರಕ್ಕಿಂತ ಅಧಿಕ ಜನಸಂಖ್ಯೆ ಹೊಂದಿದ ಶಿರಹಟ್ಟಿ ಪಟ್ಟಣದಲ್ಲಿ ಸದ್ಯಕ್ಕೆ ಒಂದೇ ಒಂದು ಶುದ್ಧ ನೀರಿನ ಘಟಕವಿದೆ. ಎರಡು ಘಟಕಗಳು ಸ್ಥಗಿತಗೊಂಡು 3 ವರ್ಷ ಕಳೆದರೂ ಅವುಗಳ ದುರಸ್ತಿಗೆ ಅಧಿಕಾರಿಗಳು ಮುಂದಾಗಿಲ್ಲ. ಇನ್ನೂ ವಿವಿಧ ವಾರ್ಡ್​ಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ವಿುಸಿದ ಸಾಮೂಹಿಕ ಶೌಚಗೃಹಗಳು ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಿರಲಿಲ್ಲ. ಈ ಕುರಿತು ‘ವಿಜಯವಾಣಿ’ ಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟವಾದ ನಂತರ ಶೌಚಗೃಹಗಳು ಸಾರ್ವಜನಿಕರಿಗೆ ಲಭ್ಯವಾಗಿವೆ.

ಇನ್ನು ಪಟ್ಟಣದ 3 ಮತ್ತು 4 ನೇ ವಾರ್ಡ್​ಗೆ ಸಂಬಂಧಿಸಿದ ಮ್ಯಾಗೇರಿ ಓಣಿಯ ಮುಖ್ಯ ಸಂಚಾರ ರಸ್ತೆ ಹೆದಗೆಟ್ಟು ವರ್ಷಗಳೇ ಕಳೆದಿವೆ. ಬೆಳ್ಳಟ್ಟಿ ಗ್ರಾಮದಲ್ಲಿನ ನೀರು ಶುದ್ಧೀಕರಣ ಘಟಕದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಕಳೆದ ಎಂಟು ತಿಂಗಳಿಂದ ವೇತನ ಸ್ಥಗಿತಗೊಂಡ ಕಾರಣ ಪಟ್ಟಣಕ್ಕೆ ತುಂಗಭದ್ರಾ ನದಿ ನೀರು ಸರಬರಾಜು ನಿಂತು ಹೋಗಿದೆ. ಹೀಗಾಗಿ, ಜನತೆಗೆ ವಾರಕ್ಕೊಮ್ಮೆ ಬೋರ್​ವೆಲ್ ನೀರೇ ಗತಿಯಾಗಿದೆ. ಪ.ಪಂ. ಮುಖ್ಯಾಧಿಕಾರಿ ಎಂ. ಮಲ್ಲೇಶ ಅವರಾಗಲಿ, ಆಡಳಿತಾಧಿಕಾರಿ ತಹಸೀಲ್ದಾರರಾಗಲಿ ತಲೆ ಕೆಡಿಸಿಕೊಂಡಿಲ್ಲ.

ಮನೆ ಖಾತೆ ಬದಲಾವಣೆಗಾಗಿ ಅರ್ಜಿ ನೀಡಿ ಎರಡು ತಿಂಗಳು ಗತಿಸಿದರೂ ಇಂದು ಬಾ.. ನಾಳೆ ಬಾ.. ಎಂದು ಸಬೂಬು ನೀಡಿ ಕಳಿಸುತ್ತಾರೆ. ಆಡಳಿತ ವ್ಯವಸ್ಥೆ ಹದಗೆಟ್ಟು ಹೋಗಿದೆ. ಪ.ಪಂ. ಅಧಿಕಾರಿಗಳಿಗೆ ಅಂಕುಶ ಹಾಕಬೇಕಾದ ಅಗತ್ಯವಿದೆ. |ಎಂ.ಪಿ. ಕಾಳಗಿ, ವಿದ್ಯಾನಗರ ನಿವಾಸಿ

ಸಿಬ್ಬಂದಿ ಕರ್ತವ್ಯ ನಿರ್ವಹಣೆ ಜವಾಬ್ದಾರಿ ಅಲ್ಲಿರುವ ಮುಖ್ಯಾಧಿಕಾರಿಯದು. ತಾಲೂಕಾಡಳಿತ ನಿಭಾಯಿಸುವುದೇ ಕಷ್ಟದಾಯಕವಾಗಿದೆ. ಪ.ಪಂ. ಆಡಳಿತಾಧಿಕಾರಿಯಾಗಿ ಕಡತಗಳಿಗೆ ರುಜು ಹಾಕುವುದಷ್ಟೇ ನನ್ನ ಕೆಲಸ ಹೊರತು, ಎಲ್ಲವನ್ನೂ ನೋಡಲು ಸಾಧ್ಯವಿಲ್ಲ. ಆದರೂ, ಮುಖ್ಯಾಧಿಕಾರಿ ಗಮನ ಸೆಳೆದು ಸಾರ್ವಜನಿಕರಿಂದ ದೂರು ಬರದಂತೆ ನೋಡಿಕೊಳ್ಳಲು ಸೂಚನೆ ನೀಡುವೆ. | ಯಲ್ಲಪ್ಪ ಗೋಣೆಣ್ಣವರ, ತಹಸೀಲ್ದಾರ್ ಹಾಗೂ ಪ.ಪಂ. ಆಡಳಿತಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net