

ನೆಲಮಂಗಲ: ತಾಲೂಕಿನಾದ್ಯಂತ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ ಮನವಿ ಮಾಡಿಕೊಂಡರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಾಡಾಗಿದ್ದ ಸಾರ್ವಜನಿಕರ ಸಮಸ್ಯೆಗಳ ಸ್ವೀಕಾರ ಸಮಾರಂಭದಲ್ಲಿ ಜನರ ಅಹವಾಲು ಸ್ವೀಕರಿಸಿ ಮಾತನಾಡಿದರು.
ತಾಲೂಕಿನ ಜನರ ಸಮಸ್ಯೆಗಳನ್ನು ಆಲಿಸಿ, ಅವುಗಳನ್ನು ಪರಿಹರಿಸುವ ಸಲುವಾಗಿ ಪ್ರತಿ ಶುಕ್ರವಾರ ತಾಲೂಕು ಕಚೇರಿಯಲ್ಲಿ ಸಭೆ ಏರ್ಪಡಿಸಲಾಗುತ್ತದೆ. ಇದರಲ್ಲಿ ಪಾಲ್ಗೊಂಡು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಂತೆ ಸೂಚಿಸಿದರು.
ಕಳೆದ ಬಾರಿಯ ಸಭೆಯಲ್ಲಿ ರೈತರು ಪ್ರಸ್ತಾಪಿಸಿದ್ದ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ರೈತರು, ಕಾರ್ಮಿಕರು, ದೀನ ದಲಿತರು ಸೇರಿ ಯಾರೇ ಆದರೂ ಏನೇ ಸಮಸ್ಯೆಗಳಿದ್ದರೂ ಮುಕ್ತವಾಗಿ ಚರ್ಚಿಸಿಬಹುದು. ಸಮಸ್ಯೆಗಳಿಗೆ ಪ್ರತಿಯೊಬ್ಬ ಅಧಿಕಾರಿಯೂ ಸ್ಪಂದಿಸಬೇಕು. ಹಾಗೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಸರ್ಕಾರದಿಂದ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಅಧಿಕಾರಿಗಳಿಂದ ಈ ಬಗ್ಗೆ ಮಾಹಿತಿ ಪಡೆದು, ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸಭೆಯಲ್ಲಿ ಚರ್ಚೆಯಾದ ವಿಷಯ: ತಾಲೂಕಿನ ಸೋಂಪುರ ಹೋಬಳಿಯ ಸೀಗೇಪಾಳ್ಯ ಗ್ರಾಮದ ಸರ್ವೇನಂ.63ರಲ್ಲಿ ಸ್ಮಶಾನಕ್ಕೆ ಜಾಗವನ್ನು ಮಂಜೂರು ಮಾಡಿಕೊಡಬೇಕು. ಈಗಾಗಲೇ ಗಂಗಕಲ್ಯಾಣ ಯೋಜನೆಯಡಿ ಕೊರೆದಿರುವ ಕೊಳವೆಬಾವಿಗಳಿಗೆ ಪಂಪು ಮೋಟಾರ್ ಅಳವಡಿಸುವುದು, ಯಂಟಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಬಾವಿಕೆರೆ ಗ್ರಾಮದ ನಕಾಶೆ ರಸ್ತೆ ಬಿಡಿಸಿಕೊಟ್ಟು ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡುವುದು ಸೇರಿ ಹಲವು ವಿಷಯಗಳು ಸಭೆಯಲ್ಲಿ ಚರ್ಚೆಯಾದವು.
ಶಿರಸ್ತೇದಾರ್ ಶ್ರೀನಿವಾಸಮೂರ್ತಿ, ರಾಜಸ್ವ ನಿರೀಕ್ಷಕ ಸುದೀಪ್, ಗ್ರಾಮಲೆಕ್ಕಾಧಿಕಾರಿ ಲೋಕೇಶ್, ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಅಂಜನಮೂರ್ತಿ, ಮುಖಂಡ ಕೋಡಪ್ಪನಹಳ್ಳಿ ವೆಂಕಟೇಶ್, ಬಾವಿಕೆರೆ ರಮೇಶ್ ಮತ್ತಿತರರು ಇದ್ದರು.