

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಕಾಂಗ್ರೆಸ್ ಸರ್ಕಾರ ಬಡವರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದು, ಹಲವಾರು ಬಡವರ ಪರ ಯೋಜನೆಗಳು ಜಾರಿಗೆ ತಂದಿದೆ. ಇದು ಬಿಜೆಪಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಪಡದಯ್ಯ ಹಕ್ಕಲ, ಹೂಗಾರ ಪ್ಲಾಟ್, ಅಜ್ಮೀರಿಯಾ ನಗರ, ಹೂಗಾರ ಪ್ಲಾಟ್, ವಾಣಿ ಪ್ಲಾಟ್ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ರಸ್ತೆ, ಒಳಚರಂಡಿ, ಪೇವರ್ಸ್ ಸೇರಿದಂತೆ 5.85 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳ ಜತೆಗೆ ಅಭಿವೃದ್ಧಿಗೂ ಕೂಡ ಸಾಕಷ್ಟು ಅನುದಾನ ನೀಡುತ್ತಿದೆ ಎಂದರು.
ಬಿಜೆಪಿಯವರು ಈ ಸರ್ಕಾರ ದಿವಾಳಿಯಾಗಿದೆ ಎಂದು ಸುಳ್ಳು ಆರೋಪ ಮಾಡುತ್ತಾರೆ. ಆದರೆ, ನಮ್ಮ ಸರ್ಕಾರ ನಿರಂತರವಾಗಿ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದೆ, ಇಡೀ ದೇಶದಲ್ಲಿಯೇ ತೆರಿಗೆ ಪಾವತಿಸುವಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಜಿಎಸ್ಟಿ ಪಾವತಿಸುವಲ್ಲಿ ಮೂರನೇ ಸ್ಥಾನದಲ್ಲಿ ಇದ್ದೇವೆ. ಕೈಗಾರಿಕಾ ಕ್ಷೇತ್ರದಲ್ಲಿ ಈ ವರ್ಷ 10.35 ಲಕ್ಷ ಕೋಟಿ ರೂಪಾಯಿ ಹೂಡಿಕೆಗೆ ಒಡಂಬಡಿಕೆ ಮಾಡಿಕೊಂಡಿದ್ದೇವೆ. ಉತ್ತರ ಕರ್ನಾಟಕದ ಕೈಗಾರಿಕೆ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ಎಂದು ಹೇಳಿದರು.
ಕೇಂದ್ರದ ಬಿಜೆಪಿ ಸರ್ಕಾರ 200 ಲಕ್ಷ ಕೋಟಿ ರೂ. ಅಧಿಕ ಸಾಲ ಮಾಡಿದೆ. ಬಿಜೆಪಿ ನಾಯಕರು ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡುತ್ತಾರೆ. ಅವರ ಆಡಳಿತದಲ್ಲಿ ಕ್ರೖೆಮ್ ರೇಟ್ ನಮಗಿಂತಲೂ ಹೆಚ್ಚು ಇತ್ತು. ಅದರ ಬಗ್ಗೆ ವರದಿ ತರಿಸಿಕೊಂಡು ನೋಡಲಿ. ಇವತ್ತು ಇಡೀ ದೇಶದಲ್ಲಿ ಅತ್ಯುತ್ತಮ ಕಾನೂನು ಸುವ್ಯವಸ್ಥೆ ಕರ್ನಾಟಕದಲ್ಲಿದೆ. ಬಿಜೆಪಿ ಆಡಳಿತ ಇರುವ ರಾಜ್ಯಗಳಾದ ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯ ಪ್ರದೇಶ, ಮಹಾರಾಷ್ಟ್ರ , ಬಿಹಾರಗಳಲ್ಲಿ ಕ್ರೖೆಂ ರೇಟ್ ಎಷ್ಟಿದೆ ಎಂಬುದನ್ನು ಕಣ್ಣು ತೆರೆದು ನೋಡಲಿ ಎಂದರು.
ವಿವಿಧ ಇಲಾಖೆ ಅಧಿಕಾರಿಗಳು, ಪಾಲಿಕೆ ಸದಸ್ಯರು, ವಾರ್ಡ್ ಕಾಂಗ್ರೆಸ್ ಅಧ್ಯಕ್ಷರು, ಕಾಂಗ್ರೆಸ್ ಕಾರ್ಯಕರ್ತರು, ಸ್ಥಳೀಯರು ಇದ್ದರು.