

ಹನೂರು: ಕ್ಷೇತ್ರದಲ್ಲಾಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಯದೆ ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ಅಪಪ್ರಚಾರ ಮಾಡುತ್ತಿರುವುದು ಅರ್ಥಹೀನವಾಗಿದೆ ಎಂದು ಶಾಸಕ ಆರ್.ನರೇಂದ್ರ ಆರೋಪಿಸಿದರು.
ಜೆಡಿಎಸ್ ಅಭ್ಯರ್ಥಿ ರಾತ್ರಿ ವೇಳೆ ಕ್ಷೇತ್ರದಲ್ಲಿ ಸಂಚರಿಸಿ ಮತ ಯಾಚಿಸುತ್ತಿದ್ದಾರೆ. ಬೆಳಗಿನ ವೇಳೆ ಈ ಕಾರ್ಯ ಮಾಡಿದರೆ ಕ್ಷೇತ್ರದಲ್ಲಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಯುತ್ತಿತ್ತು. ರಾಜಕೀಯವಾಗಿ ಹೊರತುಪಡಿಸಿದರೆ ಬೇರೆ ದೃಷ್ಟಿಕೋನದಿಂದ ಕ್ಷೇತ್ರವನ್ನು ನೋಡುತ್ತಿಲ್ಲ. ನನ್ನ ಅಧಿಕಾರಾವಧಿಯಲ್ಲಿ ಕೆ-ಶಿಪ್ ಯೋಜನೆಯಡಿ ರಸ್ತೆ ಅಭಿವೃದ್ಧಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನ, 3.5 ಕೋಟಿ ರೂ. ವೆಚ್ಚದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, 80 ಕೋಟಿ ರೂ. ವೆಚ್ಚದಲ್ಲಿ ಏಕಲವ್ಯ, ಮುರಾರ್ಜಿ, ಇಂದಿರಾಗಾಂಧಿ ಮಾದರಿ ವಸತಿ ಶಾಲೆಗಳ ಸ್ಥಾಪನೆ, ಹಾಸ್ಟೆಲ್‌ಗಳ ಸ್ಥಾಪನೆ ಹಾಗೂ 213 ಸಮುದಾಯ ಭವನಗಳ ನಿರ್ಮಾಣ ಹಾಗೂ ಮ.ಬೆಟ್ಟದಲ್ಲಿ ಪ್ರಾಧಿಕಾರ ರಚನೆಯಾದ ಬಳಿಕ 120 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಈ ಬಗ್ಗೆ ತಿಳಿಯದೆ ಅಪಪ್ರಚಾರ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಸಾಗುವಳಿ ಚೀಟಿ ಕೊಡುವುದಷ್ಟೇ ಬಾಕಿ:
ಜಾಗೇರಿ ಬಳಿ 6 ಗ್ರಾಮಗಳಿದ್ದು, ಇಲ್ಲಿನ ರೈತರು ಸುಮಾರು 3 ಸಾವಿರ ಎಕರೆಯಲ್ಲಿ 1980 ರಿಂದಲೂ ಕೃಷಿ ಮಾಡುತ್ತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ತಕರಾರು ಇದ್ದು, ರೈತರಿಗೆ ಕಿರುಕುಳ ನೀಡುತ್ತಿದ್ದರು. ಇದನ್ನು ಮನಗಂಡು ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಿ ತೊಂದರೆಯಾಗುವುದನ್ನು ತಪ್ಪಿಸಲಾಗಿದ್ದು, ಸಾಗುವಳಿ ಚೀಟೆಯಷ್ಟೇ ನೀಡಬೇಕಿದೆ. ಅಲ್ಲದೇ, ಈ ಭಾಗದ ಗ್ರಾಮಗಳಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಈ ಬಗ್ಗೆ ತಿಳಿದುಕೊಳ್ಳದೆ ಮಾತನಾಡುವುದು ತರವಲ್ಲ ಎಂದರು.
ಪಕ್ಷ ಸೇರ್ಪಡೆ: ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೆಡಿಎಸ್ ಹಾಗೂ ಬಿಜೆಪಿಯ 40ಕ್ಕೂ ಹೆಚ್ಚು ಮುಖಂಡರು ಶಾಸಕ ಆರ್.ನರೇಂದ್ರ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.
ಈ ವೇಳೆ ಆದಿ ಸಮುದಾಯದ ಹಿರಿಯ ಮುಖಂಡ ಪಾಳ್ಯ ರಾಚಪ್ಪ ಮಾತನಾಡಿ, ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಜಾತೀಯತೆಯ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಪಕ್ಷಕ್ಕಾಗಿ ಹಲವು ವರ್ಷಗಳಿಂದ ದುಡಿದವರನ್ನು ಕಡೆಗಣಿಸಲಾಗಿದೆ. ಹಾಗಾಗಿ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿರುವ ಶಾಸಕ ಆರ್.ನರೇಂದ್ರ ಅವರ ಕಾರ್ಯವೈಖರಿಯನ್ನು ಮೆಚ್ಚಿ ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದೇವೆ ಎಂದರು.
ಇದೇ ವೇಳೆ ಪಿ.ಜಿ.ಪಾಳ್ಯ ಗ್ರಾಪಂ ಉಪಾಧ್ಯಕ್ಷೆ ನೀಲಾ, ಹಿರಿಯ ಮುಖಂಡ ನಿಂಗಶೆಟ್ಟಿ ಸೇರಿದಂತೆ 40ಕ್ಕೂ ಹೆಚ್ಚು ಜನರು ಪಕ್ಷ ಸೇರ್ಪಡೆಯಾದರು. ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಪಪಂ ಉಪಾಧ್ಯಕ್ಷ ಗಿರೀಶ್, ತಾಪಂ ಮಾಜಿ ಸದಸ್ಯ ಜವಾದ್ ಆಹಮದ್, ಮುಖಂಡರಾದ ವಿಷ್ಣುಕುಮಾರ್, ಜಗದೀಶ್, ಸುರೇಶ್, ಸಿದ್ದರಾಜು ಇದ್ದರು.