ಅಭಿವೃದ್ಧಿ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಿ

5 HBD 1
ಚಿಟಗುಪ್ಪ ತಾಲೂಕಿನ ಕಂದಗೂಳದಲ್ಲಿ ಶುಕ್ರವಾರ ರಸ್ತೆ ಕಾಮಗಾರಿಗೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಭೂಮಿಪೂಜೆ ನೆರವೇರಿಸಿದರು. ಎಂಎಲ್ಸಿ ಭೀಮರಾವ ಪಾಟೀಲ್, ರೇಣುಕಾ ಉಡಬಾಳ, ಅಣ್ಣೆಪ್ಪ ನಾಗನಕೇರಾ, ಅಮೃತರಾವ ಮರಕಲೆ, ಸಂತೋಷ ಪಾಟೀಲ, ವಿಶ್ವನಾಥ ಪಾಟೀಲ, ಶ್ರೀಮಂತ ಪಾಟೀಲ್ ಇತರರಿದ್ದರು.
Published on

ಚಿಟಗುಪ್ಪ: ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯಗುರಿಯಾಗಿದ್ದು, ರಸ್ತೆ, ಶಾಲಾ ಕೋಣೆ, ಆರೋಗ್ಯ ಸೇವೆ ಸೇರಿ ಮೂಲಸೌಲಭ್ಯ ಒದಗಿಸಿಕೊಡಲು ಸದಾ ಬದ್ದನಾಗಿದ್ದೇನೆ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.

ಕಂದಗೂಳ ಗ್ರಾಮದಲ್ಲಿ ೨೦೨೪-೨೫ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಮೈಕ್ರೋ ಮತ್ತು ಮ್ಯಾಕ್ರೋ ಯೋಜನೆಯಡಿ ೨.೨ ಕೋಟಿ ರೂ. ವೆಚ್ಚದಲ್ಲಿ ಕಂದಗೂಳದಿಂದ ಮಂಗಲಗಿವರೆಗಿನ ರಸ್ತೆ ಕಾಮಗಾರಿಗೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಜನರ ಬೇಡಿಕೆಯಂತೆ ಕ್ಷೇತ್ರದ ನಾನಾ ಗ್ರಾಮಗಳಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು.

ಸರ್ಕಾರಿ ಶಾಲೆಯ ಮಕ್ಕಳಿಗೂ ಗುಣಮಟ್ಟದ ಶಿಕ್ಷಣದ ಜತೆಗೆ ಸೌಲಭ್ಯ ಒದಗಿಸಲು ಆದ್ಯತೆ ನೀಡಲಾಗುತ್ತಿದೆ. ಕೆಕೆಆರ್‌ಡಿಬಿ ಯೋಜನೆಯಡಿ ಹಲವಾರು ಕಾಮಗಾರಿಗಳನ್ನು ಕ್ಷೇತ್ರದಲ್ಲಿ ಚಾಲನೆ ನೀಡಲಾಗುತ್ತಿದೆ. ನಿಗದಿತ ಸಮಯದಲ್ಲಿ ಕೆಲಸ ಪೂರ್ತಿಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್ ಮಾತನಾಡಿ, ಮಾಜಿ ಸಚಿವ ರಾಜಶೇಖರ ಪಾಟೀಲ ಅವರ ಅವಧಿಯಲ್ಲಿ ಕ್ಷೇತ್ರದ ಎಲ್ಲ ಕಡೆಗಳಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿವೆ. ಈಗಲು ಸರ್ಕಾರ ಅನುದಾನ ಒದಗಿಸುತ್ತಿದ್ದು, ಗ್ರಾಮಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳು ಗುಣಮಟ್ಟದಿಂದ ನಡೆಯಬೇಕು. ಕಳಪೆ ಕಂಡುಬಂದಲ್ಲಿ ಸಂಬಂಧಿತರ ವಿರುದ್ಧ ಮುಲಾಜಿಲ್ಲದೆ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸರ್ಕಾರದ ಅನುದಾನ ಸದ್ಬಳಕೆಯಾಗುವ ಮೂಲಕ ಸಾರ್ವಜನಿಕರಿಗೆ ಸೌಲಭ್ಯಗಳು ತಲುಪಲು ಅಧಿಕಾರಿಗಳು ಗಮನ ಹರಿಸಬೇಕೆಂದು ತಿಳಿಸಿದರು.

ತಾಳಮಡಗಿ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಪ್ರಾಂಗಣದಲ್ಲಿ ಎರಡು ಕೊಠಡಿಗಳ ನಿರ್ಮಾಣ ಕಾರ್ಯಕ್ಕೆ ಶಾಸಕರು ಭೂಮಿಪೂಜೆ ನೆರವೇರಿಸಿದರು. ಗ್ರಾಪಂ ಅಧ್ಯಕ್ಷೆ ರೇಣುಕಾ ಉಡಬಾಳ, ಉಪಾಧ್ಯಕ್ಷ ಅಣ್ಣೆಪ್ಪ ನಾಗನಕೇರಾ, ಪಿಡಿಒ ಅಮೃತರಾವ ಮರಕಲೆ, ಪ್ರಮುಖರಾದ ಸಂತೋಷ ಪಾಟೀಲ, ವಿಶ್ವನಾಥ ಪಾಟೀಲ, ಶ್ರೀಮಂತ ಪಾಟೀಲ್, ಉಮೇಶ ಕುಲಕರ್ಣಿ, ಬಾಬುರಾವ ಪಾಟೀಲ, ಮಾರುತಿ ಖಂದಾರಿ, ಭದ್ರೇಶ ಪಾಟೀಲ, ನಾಗಭೂಷಣ ಸಂಗಮ, ಮಾಣಿಕರಾವ ಹಾವಶೆಟ್ಟಿ, ರಾಜಕುಮಾರ ಪಾವಡಶೆಟ್ಟಿ, ಭೀಮರಾವ ನಾಗನಕೇರಾ, ರವಿ ಹಾವಶೆಟ್ಟಿ, ಬಸವರಾಜ ಪಾಟೀಲ್ ಮಾಡಗೂಳ ಇತರರಿದ್ದರು.

ಘಾಟಬೋರಳ ಗ್ರಾಮದಲ್ಲಿ ಭೂಮಿಪೂಜೆ: ಹುಮನಾಬಾದ್ ತಾಲೂಕಿನ ಘಾಟಬೋರಳ ಗ್ರಾಮದಲ್ಲಿ ೨೦೨೪-೨೫ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನೆಯಡಿ ಮತ್ತು ಶಾಸಕರ ಅನುದಾನ ಅಡಿಯಲ್ಲಿ ಒಟ್ಟು ೬.೭೯ ಕೋಟಿ ರೂ. ವೆಚ್ಚದ ರಸ್ತೆ ಸೇರಿ ವಿವಿಧ ಕಾಮಗಾರಿಗೆ ಶುಕ್ರವಾರ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಭೂಮಿ ಪೂಜೆ ನೇರವೇರಿಸಿದರು. ವಿಧಾನ ಪರಿಷತ್ ಸದಸ್ಯ ಎಂ.ಜಿ.ಮೂಳೆ, ಗ್ರಾಪಂ ಅಧ್ಯಕ್ಷೆ ಪ್ರಭಾವತಿ ಗಂಟೆ, ಉಪಾಧ್ಯಕ್ಷೆ ಮನಿಷಾ ಮನೋಜಕುಮಾರ, ಪ್ರಮುಖರಾದ ಅಭಿಮನ್ಯು ನಿರಗುಡೆ, ಸುಭಾಷ ಗಣೇಶ, ಸಾಯಿನಾಥ ಹಂಡಗೆ ಇತರರಿದ್ದರು. ದುಬಲಗುಂಡಿಯಲ್ಲಿ ೧.೮ಕೋಟಿ ರೂ.ವೆಚ್ಚದಲ್ಲಿ ರಾಜ್ಯ ಹೆದ್ದಾರಿ ಜೋಡಣೆ ರಸ್ತೆ ಕಾಮಗಾರಿಗೂ ಪೂಜೆ ನೆರವೇರಿಸಿದರು.

ಗ್ರಾಮಗಳ ಅಭಿವೃದ್ಧಿಯಲ್ಲಿ ಗ್ರಾಪಂ ಪಾತ್ರವೂ ಮುಖ್ಯವಾಗಿದೆ. ಪಂಚಾಯಿತಿಗೆ ಬರುವ ಅನುದಾನದಲ್ಲಿ ಕ್ರಿಯಾ ಯೋಜನೆ ರೂಪಿಸಿ ಅಭಿವೃದ್ಧಿ ಕೆಲಸಕ್ಕೆ ಆದ್ಯತೆ ನೀಡಬೇಕು.

| ಡಾ.ಸಿದ್ದಲಿಂಗಪ್ಪ ಪಾಟೀಲ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net