

ಹಾಸನ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಹಾಸನ ಕ್ಷೇತ್ರದಲ್ಲಿ ದಲಿತ ಸಂಘಟನೆಗಳು ಶಾಸಕ ಪ್ರೀತಂ ಜೆ ಗೌಡ ಅವರಿಗೆ ಬೆಂಬಲ ನೀಡಲಿದ್ದೇವೆ ಎಂದು ಸಮತಾ ಸೈನಿಕ ದಳದ ಅಧ್ಯಕ್ಷ ಸತೀಶ್ ತಿಳಿಸಿದರು.
ಹಾಸನ ವಿಧಾನಸಭೆ ಕ್ಷೇತ್ರದಲ್ಲಿ ಶಾಸಕ ಪ್ರೀತಂ ಜೆ ಗೌಡ ಅವರು ಶ್ರೀನಗರ, ಚಿಪ್ಪಿನ ಕಟ್ಟೆ ಹಾಗೂ ಇತರೆ ಕೊಳಚೆ ಪ್ರದೇಶಗಳು ಸೇರಿದಂತೆ ಹಲವು ವಾರ್ಡ್‌ಗಳ ನಿವಾಸಿಗಳಿಗೆ ಅನೇಕ ವರ್ಷಗಳಿಂದ ಸಿಗದ ಹಕ್ಕುಪತ್ರವನ್ನು ಅವರ ಅವಧಿಯಲ್ಲಿ ಕೊಡಿಸಿಕೊಡುವ ಕೆಲಸ ಮಾಡಿದ್ದಾರೆ. ರಸ್ತೆ ಬದಿ ವ್ಯಾಪಾರಿಗಳಿಗೆ ಫುಡ್ ಕೋರ್ಟ್, ಆಟೋ ಚಾಲಕರಿಗೆ, ಟ್ಯಾಕ್ಸಿ ಹಾಗೂ ಆಂಬುಲೆನ್ಸ್ ಚಾಲಕರಿಗೆ ಟ್ಯಾಕ್ಸಿ ನಿಲ್ದಾಣ ಸೇರಿದಂತೆ ನಗರದಲ್ಲಿ ಯುಜಿಡಿ ಕಾಮಗಾರಿ ಕೆಲಸಗಳನ್ನು ಮಾಡುವ ಮೂಲಕ ಜನಪರ ಕೆಲಸ ಮಾಡಿದ್ದಾರೆ. ಅಭಿವೃದ್ಧಿ ಕೆಲಸ ಮಾಡುತ್ತಿರುವ ಶಾಸಕ ಪ್ರೀತಂ ಜೆ ಗೌಡರಿಗೆ ಈ ಬಾರಿ ನಾವು ಬೆಂಬಲ ಸೂಚಿಸಲಿದ್ದೇವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬಿಜೆಪಿ ಸರ್ಕಾರ ದಲಿತ ವಿರೋಧಿ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ವಿರುದ್ಧ ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿದ್ದೀರಿ. ಅವರಿಗೆ ಈಗ ಬೆಂಬಲ ಸೂಚಿಸುತ್ತಿದ್ದೀರಿ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ದಲಿತ ಸಂಘಟನೆಗಳು ನಮ್ಮದೆ ಆದ ತತ್ವ ಸಿದ್ಧಾಂತಗಳನ್ನು ಹೊಂದಿದೆ. ನಮ್ಮ ತತ್ವಗಳಿಗೆ ವಿರುದ್ಧವಾಗಿ ಯಾರೇ ನಡೆದುಕೊಂಡರು ಸರಿಯೇ ಅವರನ್ನು ನಾವು ವಿರೋಧಿಸುತ್ತೇವೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಯಾವುದೇ ಪಕ್ಷ ಆದರೂ ಸರಿಯೇ ನಾವು ವಿರೋಧ ವ್ಯಕ್ತಪಡಿಸುತ್ತೇವೆ. ಹಾಸನ ವಿಧಾನಸಭೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ನೋಡಿ, ಮುಂದೆಯೂ ಸಹ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾರೆ ಎನ್ನುವ ಭರವಸೆಯಿಂದ ದಲಿತ ಸಮುದಾಯ ಪ್ರೀತಂ ಜೆ ಗೌಡರಿಗೆ ಬೆಂಬಲ ಸೂಚಿಸುತ್ತಿದ್ದೇವೆ. ನಾಮಪತ್ರ ಸಲ್ಲಿಕೆ ವೇಳೆ ನಮ್ಮ ಸಂಘಟನೆಗಳ ಮುಖಂಡರು ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ದಲಿತ ಸಂಘಟನೆಗಳ ಮುಖಂಡರಾದ ಕೆ. ಪ್ರಕಾಶ್, ಕುಮಾರಸ್ವಾಮಿ, ಜಗದೀಶ್, ರಾಜೇಶ್, ಧರ್ಮೇಶ್ ಹಾಜರಿದ್ದರು.