ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ನಡೆಯುವ ಲೂಟಿ ತಡೆಗೆ ಕಡಿವಾಣ ಹಾಕಿ

26arsph1ep
Published on

ಅರಸೀಕೆರೆ: ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದ ಹೆಸರಿನಲ್ಲಿ ಕ್ಷೇತ್ರದಲ್ಲಿ ನಡೆಯುತ್ತಿರುವ ಲೂಟಿ ತಡೆಗೆ ಕಡಿವಾಣ ಹಾಕುವ ಹೊಣೆಗಾರಿಕೆ ನಿಮ್ಮೆಲ್ಲರ ಮೇಲಿದೆ ಎಂದು ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ಹೇಳಿದರು.


ನಗರದ ಲಕ್ಷ್ಮೀದೇವರಹಳ್ಳಿ ಗೇಟ್ ಬಳಿ ಭಾನುವಾರ ಮಡಿಲಕ್ಕಿ, ಅರಿಶಿಣ, ಕುಂಕುಮ ಬಾಗಿನ ಸಮರ್ಪಣೆ ನಿಮಿತ್ತ ಆಯೋಜಿಸಿದ್ದ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಎತ್ತಿನಹೊಳೆ, ಮನೆ ಮನೆಗೆ ಗಂಗೆ, ಬಹುಗ್ರಾಮ ಕುಡಿಯುವ ನೀರು, ರಾಜ್ಯ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ, ಕಾಂಕ್ರೀಟ್ ರಸ್ತೆ, ಚರಂಡಿ ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಕಳೆದ ಹದಿನೈದು ವರ್ಷದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುದಾನದ ಮಹಾಪೂರವೇ ಹರಿದುಬಂದಿದೆ. ಆದರೆ ಕಾಮಗಾರಿಗಳ ಗುಣಮಟ್ಟ ನಿರೀಕ್ಷಿತ ಹಾಗೂ ನಿಗದಿತ ರೀತಿಯಲ್ಲಿ ನಡೆಯದೆ ಭಾರಿ ಪ್ರಮಾಣದ ಲೂಟಿ ನಿತ್ಯ ನಿರಂತರವಾಗಿದ್ದು, ಪ್ರಶ್ನಿಸುವ ಸಮಯ ಹತ್ತಿರವಾಗಿದೆ. ಇಂತಹ ಲೂಟಿಯನ್ನು ಇನ್ನೆಷ್ಟು ದಿನ ಸಹಿಸಿಕೊಳ್ಳಲು ಸಾಧ್ಯವಿದೆ ಎಂಬುದನ್ನು ಕ್ಷೇತ್ರದ ಮತದಾರರು ಅರ್ಥಮಾಡಿಕೊಳ್ಳುವ ಜತೆಗೆ, ಕಡಿವಾಣ ಹಾಕಲು ನಮ್ಮೊಂದಿಗೆ ಕೈಜೋಡಿಸಬೇಕು ಎಂದರು.


ಅನ್ನದಾತರ ಹಿತ ಕಾಯುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೃಷಿ ಸಮ್ಮಾನ್ ಯೋಜನೆಯಡಿ ಬ್ಯಾಂಕ್ ಖಾತೆಗೆ ಜಮಾ ಮಾಡುವ ಮೂಲಕ ನೈಜ ಕಾಳಜಿ ಪ್ರದರ್ಶಿಸುತ್ತಿವೆ. ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದ್ದು ಕೆರೆಗಳಿಗೆ ನೀರು ಹರಿಯುವ ವಿಶ್ವಾಸವಿದೆ. 10 ಲಕ್ಷ ಉದ್ಯೋಗಾವಕಾಶ ಸೃಷಿಸುವ ಕಾರ್ಯ ಪ್ರಗತಿಯಲ್ಲಿದ್ದು, ಒಂದು ಲಕ್ಷ ಯುವಕರು ಇದರ ಪ್ರಯೋಜನ ಪಡೆಯಲಿದ್ದಾರೆ. ಗ್ರಾಮ ವಾಸ್ತವ್ಯದ ಮೂಲಕ ಈಗಾಗಲೇ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ ಹಕ್ಕುಪತ್ರ ನೀಡುತ್ತಿರುವುದು ಸಾಮಾನ್ಯ ಸಂಗತಿಯಲ್ಲ ಎಂಬುದನ್ನು ತಾವು ಮರೆಯಬಾರದು. ತಾಲೂಕಿನ ಅಗ್ಗುಂದ ತಾಂಡಾಗಳ ಹಲವರಿಗೆ ಹಕ್ಕುಪತ್ರ ನೀಡಲಾಗಿದ್ದು ಶೀಘ್ರವೇ ಎಲ್ಲರಿಗೂ ಪ್ರಯೋಜನ ದೊರೆಯಲಿದೆ ಎಂದರು.


ಸತತ ಹದಿನಾಲ್ಕು ವರ್ಷದಿಂದ ಬರ ತಾಂಡವವಾಡುತ್ತಿದ್ದು ಕೆರೆ-ಕಟ್ಟೆಗಳು ಭಣಗುಡುತ್ತಿದ್ದವು. ಜತೆಗೆ ಬದುಕು ದುಸ್ತರವೆನಿಸಿದ್ದರಿಂದ ಜನರು ಉದ್ಯೋಗ ಅರಸಿ ಊರು ತೊರೆದು ಹೋಗುವಂತಾಗಿತ್ತು. ಭಗವಂತನ ಕೃಪೆಯಿಂದ ಪ್ರಸಕ್ತ ವರ್ಷ ಉತ್ತಮ ಮಳೆಯಾಗಿದ್ದು ಜೀವಕಳೆ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಕ್ಷೇತ್ರಾದ್ಯಂತ ಮಹಿಳಾ ಸಮಾವೇಶ ಆಯೋಜಿಸಿ ಬಾಗಿನ, ಮಡಿಲಕ್ಕಿ, ಅರಿಶಿಣ, ಕುಂಕುಮ ವಿತರಿಸುವ ಮೂಲಕ ಭಾರತೀಯ ಪರಂಪರೆ ಹಾಗೂ ಸಂಸ್ಕೃತಿಯನ್ನು ಎತ್ತಿಹಿಡಿಯುವ ಕೆಲಸ ಮಾಡಲಾಗುತ್ತಿದ್ದು, ದೇವಾಂಗ ಸಮಾಜದ ನೇಕಾರರ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.


ತೀರ್ಮಾನಿಸಿ: ಅನ್ನದಾತರಾದ ನೀವು ದನಗಳ ಜಾತ್ರೆಗೆ ಹೋಗಿ ಎರಡು ಹಲ್ಲುಗಳ ಹೋರಿಗಳನ್ನು ಕೊಳ್ಳುವಿರೋ ಅಥವಾ ಏಳು ಹಲ್ಲುಗಳ ಎತ್ತುಗಳನ್ನು ಆಯ್ಕೆ ಮಾಡುವಿರೋ ನೀವೇ ತೀರ್ಮಾನಿಸಿ ಎನ್ನುವ ಮೂಲಕ ಮೂರು ಬಾರಿ ಶಾಸಕರಾಗಿರುವ ಕೆ.ಎಂ.ಶಿವಲಿಂಗೇಗೌಡರನ್ನು ಚುನಾವಣೆಯಲ್ಲಿ ತಿರಸ್ಕರಿಸಬೇಕು ಎಂದು ಹಾಸ್ಯ ಚಟಾಕಿ ಹಾರಿಸಿ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು. ಅಲ್ಲದೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಮಾವೇಶದ ಅರಂಭದಲ್ಲಿಯೇ ಅವರೊಂದಿಗಿನ ರಾಜಕೀಯ ಒಡನಾಟವನ್ನು ಎನ್.ಆರ್.ಸಂತೋಷ್ ಸ್ಮರಿಸಿದರು.

ನಗರಸಭೆ ಅಧ್ಯಕ್ಷ ಸಿ.ಗಿರೀಶ್ ಮಾತನಾಡಿ, ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಸಮೀವುಲ್ಲಾ ನೊಳಂಬ ಲಿಂಗಾಯತ ಸಮುದಾಯಕ್ಕೆ ಸೇರಿದ ಆಸ್ತಿ ವಿಷಯದಲ್ಲಿ ಮೂಗು ತೂರಿಸಿ ನನ್ನನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸುವ ಜತೆಗೆ ಸದಸ್ಯತ್ವ ರದ್ದಾಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಂತಹ ಹೀನ ಪ್ರವೃತ್ತಿಯಿಂದ ಕ್ಷೇತ್ರದ ವೀರಶೈವ ಲಿಂಗಾಯತ ಹಾಗೂ ಪ.ಪಂಗಡಕ್ಕೆ ದೊಡ್ಡ ಅನ್ಯಾಯವಾಗಿದ್ದು ತಕ್ಕಬೆಲೆ ತೆರಬೇಕಾಗುತ್ತದೆ ಎಂದು ಕಿಡಿಕಾರಿದರು.

ಲಂಬಾಣಿ ಸಮಾಜದ ಮುಖಂಡ ಸದಾಶಿವನಾಯ್ಕ ಮಾತನಾಡಿ, ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿದ ಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲಲಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಕಲಬುರಗಿಯಲ್ಲಿ ಹಕ್ಕುಪತ್ರ ವಿತರಿಸಿದ ಐತಿಹಾಸಿಕ ಕ್ಷಣಗಳನ್ನು ಎಂದಿಗೂ ಮರೆಯುವುದಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಲಂಬಾಣಿ ಸಮುದಾಯ ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ಬೆಂಬಲಕ್ಕೆ ನಿಲ್ಲಲಿದೆ ಎಂದು ಭರವಸೆ ನೀಡಿದರು.

ಬಿಜೆಪಿ ಗ್ರಾಮಾಂತರ ಮಂಡಲಾಧ್ಯಕ್ಷ ದುಮ್ಮೇನಹಳ್ಳಿ ರಮೇಶ್, ಒಬಿಸಿ ಮುಖಂಡ ವೈ.ಕೆ.ದೇವರಾಜ್, ತಾಪಂ ಮಾಜಿ ಸದಸ್ಯ ಶಿವಕುಮಾರ್, ಅಮ್ಮನಹಟ್ಟಿ ಹರೀಶ್, ಲಾಳನಕೆರೆ ಯೋಗೀಶ್ ಇನ್ನಿತರರು ಮಾತನಾಡಿದರು.
ಜಿಪಂ ಮಾಜಿ ಸದಸ್ಯ ಕೃಷ್ಣಾನಾಯ್ಕಾ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎನ್.ಡಿ.ಪ್ರಸಾದ್, ಡಾ.ರವಿ, ಕೆವಿಎನ್ ಶಿವು, ಜಯರಾಮ್,ರಾಂಪುರ ಶೇಖರಪ್ಪ, ಮಂಜುನಾಥ್, ಲೋಕೇಶ್, ಬೆಳಗುಂಬ ಚಂದು, ರಘು, ಉಮೇಶ್ ಭೋವಿ, ಕುಣಗಟ್ಟಳ್ಳಿ ಮಂಜಣ್ಣ ಸೇರಿದಂತೆ ಹಲವು ಮುಖಂಡರು ವೇದಿಕೆಯಲ್ಲಿದ್ದರು.
ಎನ್.ಆರ್.ಸಂತೋಷ್ ಅವರ ತಾಯಿ ಗಿರಿಜಮ್ಮ ಮಾತನಾಡಿದರು. ಪತ್ನಿ ಜಾಹ್ನವಿ ಹಾಗೂ ಕುಟುಂಬ ಸದಸ್ಯರ ಜತೆಗೂಡಿ ತಾಯಂದಿರಿಗೆ ಅರಿಶಿಣ, ಕುಂಕುಮ, ಸೀರೆ, ಮಡಿಲಕ್ಕಿ ನೀಡುವ ಮೂಲಕ ಗೌರವ ಸಮರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net