ಅಭಿವೃದ್ಧಿ ಕಾಮಗಾರಿ ಶೀಘ್ರ ಆರಂಭಿಸಿ

20 NRD-3
Published on

ನರಗುಂದ: ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಅತೀ ಶೀಘ್ರದಲ್ಲೇ ಚುನಾವಣೆ ಘೊಷಣೆ ಆಗುವ ಸಾಧ್ಯತೆ ಇದೆ. ಆದ್ದರಿಂದ ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳಿಂದ ಕೈಗೊಳ್ಳಬೇಕಾಗಿರುವ ಮಹತ್ವದ ಅಭಿವೃದ್ಧಿ ಕಾಮಗಾರಿಗಳನ್ನು ತಕ್ಷಣವೇ ಪ್ರಾರಂಭಿಸಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕುರ್ತಕೋಟಿ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 5ನೇ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಸರ್ಕಾರ ಈಗಾಗಲೇ ರಾಜ್ಯದ ಎಲ್ಲ ಪದವಿ ಕಾಲೇಜುಗಳನ್ನು ಆರಂಭಿಸಿದೆ. ಚಳಿಗಾಲಕ್ಕೆ ಕರೊನಾ ಸೋಂಕು ಮತ್ತೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಬಗ್ಗೆ ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಹೆಚ್ಚಿನ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಪ್ರಸಕ್ತ ವರ್ಷ ಎಸ್ಸೆಸ್ಸೆಲ್ಸಿ ವಾರ್ಷಿಕ ಫಲಿತಾಂಶ ಸುಧಾರಿಸಲು ಸಂಬಂಧಪಟ್ಟ ಅಧಿಕಾರಿಗಳು ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ತಾಪಂ ಅಧ್ಯಕ್ಷ ವಿಠ್ಠಲ ತಿಮ್ಮರಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.

ಆರೋಗ್ಯ ಇಲಾಖೆ ಹಿರಿಯ ಸಹಾಯಕ ಎಂ.ಆರ್. ಕುಲಕರ್ಣಿ ಪ್ರತಿಕ್ರಿಯಿಸಿ, ತಾಲೂಕಿನಾದ್ಯಂತ ಇದುವರೆಗೆ 9029 ಜನರ ಕೋವಿಡ್ ತಪಾಸಣೆ ಮಾಡಲಾಗಿದೆ. ಇದೀಗ ಕರೊನಾ ಪ್ರಕರಣಗಳು ಕಡಿಮೆ ಆಗಿದ್ದರಿಂದ ಬೆನಕನಕೊಪ್ಪ ಮುರಾರ್ಜಿ ವಸತಿ ಶಾಲೆಯಲ್ಲಿ ಆರಂಭಿಸಿದ್ದ ಕ್ವಾರಂಟೈನ್ ಕೇಂದ್ರ ಬಂದ್ ಮಾಡಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ನಿತ್ಯ ಕಾಲೇಜಿಗೆ ತೆರಳಿ ವಿದ್ಯಾರ್ಥಿಗಳ ಕೋವಿಡ್ ತಪಾಸಣೆ ನಡೆಸುತ್ತಿದ್ದಾರೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ, ಶಸ್ತ್ರಚಿಕಿತ್ಸೆಗಳು ಸೇರಿ ಮುಂತಾದ ಸೇವೆಗಳನ್ನು ಎಂದಿನಂತೆ ಮುಂದುವರಿಸಿದೆ ಎಂದು ತಿಳಿಸಿದರು.

ತಾಪಂ ಮಾಜಿ ಅಧ್ಯಕ್ಷ ಪ್ರಭುಲಿಂಗಪ್ಪ ಎಲಿಗಾರ ಮಾತನಾಡಿ, ಅಂಗನವಾಡಿ ಕೇಂದ್ರಗಳಿಂದ ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ಗುಣಮಟ್ಟದ ಆಹಾರ ಪೂರೈಕೆಯಾಗುತ್ತಿಲ್ಲ. ಕೆಲವೊಂದು ಕೇಂದ್ರಗಳು ದೇವಸ್ಥಾನಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇದರಿಂದ ಗರ್ಭಿಣಿ ಬಾಣಂತಿಯರು ಪೌಷ್ಟಿಕ ಆಹಾರ ಸೇವಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಡಿಪಿಒಗೆ ತಿಳಿಸಿದರು.

ಸಿಡಿಪಿಒ ರೂಪಾ ಗಂಧದ ಮಾತನಾಡಿ, ನರಗುಂದ ತಾಲೂಕಿನಲ್ಲಿ 130 ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಮಾತೃವಂದನಾ ಕಾರ್ಯಕ್ರಮದ ಅನುಷ್ಠಾನದಲ್ಲಿ ನರಗುಂದ ತಾಲೂಕು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಕೆಲವೊಂದು ಕೇಂದ್ರಗಳಲ್ಲಿ ಪೌಷ್ಟಿಕ ಆಹಾರ ವಿತರಣೆ ಸರಿಯಾಗಿ ನಡೆಯುತ್ತಿಲ್ಲ ಎಂಬ ಆರೋಪಗಳಿವೆ. ಈ ಬಗ್ಗೆ ಖುದ್ದು ಭೇಟಿ ನೀಡಿ ಪರಿಶೀಲಿಸುವುದಾಗಿ ಸಭೆಗೆ ತಿಳಿಸಿದರು.

ರೈತರ ಹಿಂಗಾರು ಬಿತ್ತನೆಗೆ ಕೃಷಿ ಇಲಾಖೆಯಿಂದ ವಿತರಿಸಲಾಗುವ ವಿವಿಧ ಬೀಜಗಳ ವಿತರಣೆಯನ್ನು ಇನ್ನೂ ಒಂದು ತಿಂಗಳು ಕಾಲ ಮುಂದುವರೆಸಬೇಕು. ಪ್ರತಿನಿತ್ಯ ರೈತರ ಪಂಪ್​ಸೆಟ್​ಗಳಿಗೆ 4 ಗಂಟೆ ಬದಲಿಗೆ 10 ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡಬೇಕು. ಕೆಲ ಲೈನ್​ವುನ್​ಗಳು ಗ್ರಾಮೀಣ ಪ್ರದೇಶಗಳಲ್ಲಿನ ವಿದ್ಯುತ್ ರಿಪೇರಿ ಕಾರ್ಯಕ್ಕೆ ರೈತರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಮತ್ತೆ ಕೆಲವರು ಗ್ರಾಮೀಣ ಪ್ರದೇಶಗಳಿಗೆ ತೆರಳದೆ ಪಟ್ಟಣದಲ್ಲೇ ಕುಳಿತು ಖಾಸಗಿ ವ್ಯಕ್ತಿಗಳಿಂದ ತಮ್ಮ ಕೆಲಸ ಮಾಡಿಸುತ್ತಿದ್ದಾರೆ. ಕರ್ತವ್ಯ ಲೋಪ ಎಸಗುತ್ತಿರುವ ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಾಪಂ ಸದಸ್ಯ ಗಿರೀಶ ನೀಲರಡ್ಡಿ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಈ ಬಗ್ಗೆ ಯಾರೊಬ್ಬರೂ ಇದುವರೆಗೆ ದೂರು ನೀಡಿಲ್ಲ. ಹಾಗೇನಾದರೂ ದೂರುಗಳು ಬಂದಲ್ಲಿ ಖಚಿತ ಮಾಹಿತಿ ಪಡೆದು ನಿರ್ಲಕ್ಷ್ಯ ತೋರಿರುವ ಅಧಿಕಾರಿ, ಸಿಬ್ಬಂದಿಗಳಿಗೆ ನೋಟಿಸ್ ಅನ್ನು ನೀಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಹೆಸ್ಕಾಂ ಪ್ರಭಾರಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಚ್.ಎಂ. ಖುದಾವಂದ ಸಭೆಗೆ ಮಾಹಿತಿ ನೀಡಿದರು.

ಬಿತ್ತನೆ ಬೀಜಗಳ ವಿತರಣೆ ಅವಧಿ ವಿಸ್ತರಿಸುವ ಕುರಿತು ಜಂಟಿ ನಿರ್ದೇಶಕರೊಂದಿಗೆ ರ್ಚಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಕೃಷಿ ಅಧಿಕಾರಿ ಶ್ರೀಶೈಲ ಅಂಗಡಿ ತಿಳಿಸಿದರು.ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಕೈಗೊಳ್ಳಲಾಯಿತು. ನರಗುಂದದಲ್ಲಿ ಸಹಾಯಕ ಕೃಷಿ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಧಾರವಾಡಕ್ಕೆ ವರ್ಗಾವಣೆಗೊಂಡಿರುವ ಚನ್ನಪ್ಪ ಅಂಗಡಿ ಅವರನ್ನು ಸತ್ಕರಿಸಲಾಯಿತು. ಸಭೆಯಲ್ಲಿ ಜಿಪಂ ಸದಸ್ಯೆ ರೇಣುಕಾ ಅವರಾದಿ, ತಾಪಂ ಉಪಾಧ್ಯಕ್ಷೆ ಗೀತಾ ನಾಗನೂರ, ಪ್ರಕಾಶಗೌಡ ತಿರಕನಗೌಡ್ರ, ಆನಂದ ಭೋವಿ, ಸಂಜೀವ ಚವ್ಹಾಣ, ಸ್ನೇಹಾ ಕೊಪ್ಪಳ, ಸುಜಾತಾ ಕಾಳೆ, ಎಂ.ಡಿ. ತೂಗುಣಸಿ, ಉಪಸ್ಥಿತರಿದ್ದರು.

ಸಿಇಒ ಗಮನಕ್ಕೆ ತಂದು ಸೂಕ್ತ ಕ್ರಮ: ಕಳೆದ ಎರಡ್ಮೂರು ಬಾರಿ ತಾಪಂ ಸಭೆಗೆ ಗೈರಾಗಿದ್ದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಶುಕ್ರವಾರದ ಸಾಮಾನ್ಯ ಸಭೆಗೂ ಗೈರಾಗಿದ್ದರು. ಇದರಿಂದ ಆಕ್ರೋಶಗೊಂಡ ತಾಪಂ ಇಒ ಸಿ.ಆರ್. ಕುರ್ತಕೋಟಿ ಅವರು, ಈಗಾಗಲೇ ಈ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ. ಆದರೂ, ಇವತ್ತಿನ ಸಭೆಗೆ ಯಾವುದೇ ಮಾಹಿತಿ ನೀಡದೆ ಗೈರು ಹಾಜರಾಗಿರುವ ಕುರಿತು ಜಿಪಂ ಸಿಇಒ ಅವರ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net