

ಮೈಸೂರು: ತಿ.ನರಸೀಪುರ ತಾಲೂಕಿನ ಕೇತುಪುರ ಗ್ರಾಮ ಪಂಚಾಯಿತಿಗೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ. ಗಾಯತ್ರಿ ಅವರು ಧಿಡೀರ್ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿ ಸೂಕ್ತ ಮಾರ್ಗದರ್ಶನ ಮಾಡಿದರು.
ಕೇತುಪುರ ಗ್ರಾಮದ ಬಹುಗ್ರಾಮ ಕುಡಿಯುವ ನೀರು ಸ್ಥಾವರಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ ಅವರು, ಸ್ಥಾವರದ ಜಾಕ್‌ವೆಲ್ ಸುತ್ತಲು ಸ್ವಚ್ಛಗೊಳಿಸಿ, ರಿಟೈನಿಂಗ್ ವಾಲ್ ನಿರ್ಮಿಸುವಂತೆ ತಿಳಿಸಿದರು. ಪ್ಯಾನಲ್ ಬೋರ್ಡ್ ದುರಸ್ತಿಯಾಗಿದ್ದು, ಕೂಡಲೇ ಸರಿಪಡಿಸಲು ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು.
ನೀರಿನ ಶುದ್ಧಿಕರಣ ಘಟಕವು ಅರಣ್ಯದಿಂದ ಸುತ್ತುವರೆದಿದ್ದು, ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿರುವುದರಿಂದ ಅಲ್ಲಿನ ಸಿಬ್ಬಂದಿ ಸುರಕ್ಷತೆಯ ದೃಷ್ಟಿಯಿಂದ ಘಟಕದ ಸುತ್ತ ಸೋಲಾರ್ ತಂತಿಬೇಲಿ ಅಳವಡಿಸಿಕೊಳ್ಳುವಂತೆ ಹೇಳಿದರು.
ಮುಖ್ಯ ರಸ್ತೆಯಿಂದ ನೀರಿನ ಶುದ್ಧಿಕರಣ ಘಟಕಕ್ಕೆ ಬರುವ ರಸ್ತೆಯು ಅರಣ್ಯ ಇಲಾಖೆಯ ಸುಪರ್ದಿಗೆ ಬರುವುದರಿಂದ ಅರಣ್ಯ ಇಲಾಖೆಗೆ ಪತ್ರ ಬರೆದು ಅನುಮತಿ ಪಡೆದು ರಸ್ತೆ ನಿರ್ಮಾಣ ಮಾಡಿಕೊಳ್ಳಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದರು.
ಗ್ರಾಮಸ್ಥರಿಗೆ ಕೊಳವೆಬಾವಿ ನೀರನ್ನು ಕೊಡುವುದರ ಬದಲಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನೀರು ನೀಡಬೇಕು. ನದಿ ನೀರನ್ನು ಟ್ಯಾಂಕ್‌ಗಳಿಗೆ ಏರಿಸಿ ಅದೇ ನೀರನ್ನು ಜನರಿಗೆ ಕೊಡುವಂತೆ ಸೂಚಿಸಿದ ಸಿಇಒ ಅವರು, ಬೋರ್‌ವೆಲ್ ನೀರನ್ನು ಹೆಚ್ಚಾಗಿ ಉಪಯೋಗಿಸುವುದರಿಂದ ಉಂಟಾಗಬಹುದಾದ ತೊಂದರೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು. ಶುದ್ಧವಾದ ಸಿಹಿ ನೀರನ್ನು ಕುಡಿಯುವಂತೆ ಅರಿವು ಮೂಡಿಸಲು ಕ್ರಮ ವಹಿಸುವಂತೆ ಪಿಡಿಒಗೆ ನಿರ್ದೇಶಿಸಿದರು.
ಗ್ರಾಮದ ಮನೆ ಮನೆಗೆ ಭೇಟಿ ನೀಡುವ ಮೂಲಕ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಕುಡಿಯುವ ನೀರು ಪೂರೈಕೆಯಾಗುತ್ತಿರುವುದನ್ನು ಪರಿಶೀಲಿಸಿದರು. ನಂತರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಲ್ಲಿಯ ಸಿಬ್ಬಂದಿ ಇ-ಹಾಜರಾತಿಯನ್ನು ವೆಬ್ ತಂತ್ರಾಂಶದಲ್ಲಿ ಪರಿಶೀಲಿಸಿದರು. ತಡವಾಗಿ ಹಾಜರಾತಿ ನಮೂದಿಸುತ್ತಿರುವ ಸಿಬ್ಬಂದಿಗೆ ನೋಟಿಸ್ ನೀಡಲು ತಾಪಂ ಕಾರ್ಯನಿರ್ವಾಹಕರಿಗೆ ತಿಳಿಸಿದರು.
ತೆರಿಗೆ ವಸೂಲಾತಿ ಪರಿಶೀಲಿಸಿ ವಸೂಲಾತಿ ಕುಂಠಿತವಾಗಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, ನೋಟಿಸ್ ನೀಡುವಂತೆ ಸೂಚಿಸಿದರು. ಗ್ರಾಮ ಪಂಚಾಯಿತಿಯ ಸುತ್ತಲು ಸ್ವಚ್ಛತೆ ಕಾಪಾಡಿಲ್ಲ. ಇದರಿಂದ ಗ್ರಾಮ ಪಂಚಾಯಿತಿಯ ಸುತ್ತಲು ಹಾಗೂ ಗ್ರಾಮ ಪಂಚಾಯಿತಿಯ ಎಲ್ಲ ರಸ್ತೆಗಳು ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸಿ ನೈರ್ಮಲ್ಯ ಕಾಪಾಡುವಂತೆ ಪಿಡಿಒಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ತಿಂಗಳಿಗೊಮ್ಮೆ ಸ್ವಚ್ಛಗೊಳಿಸುವಂತೆ ಸೂಚನೆ
ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರಿನ ಟ್ಯಾಂಕ್‌ಗಳನ್ನು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಬೇಕು. ಹಳೇ ಓವರ್‌ಹೆಡ್ ಟ್ಯಾಂಕ್‌ಗಳಿಗೆ ವಾಲ್ ಚೇಂಬರ್ ನಿರ್ಮಿಸುವುದು, ಎಲ್ಲ ಟ್ಯಾಂಕ್‌ಗಳಿಗೂ ಲೈಟನಿಂಗ್ ಅರೆಸ್ಟರ್ ಕಡ್ಡಾಯವಾಗಿ ಅಳವಡಿಸುವುದು ಹಾಗೂ ಟ್ಯಾಂಕ್ ಹತ್ತಲು ನೀರುಗಂಟಿಗಳಿಗೆ ಅನುಕೂಲವಾಗುವಂತೆ ಲ್ಯಾಡರ್‌ಗಳಿಗೆ ರೇಲಿಂಗ್ಸ್‌ಗಳನ್ನು ಕಡ್ಡಾಯವಾಗಿ ಅಳವಡಿಸಲು ಕ್ರಮವಹಿಸುವಂತೆ ಸೂಚಿಸಿದರು. ಕಾಲಕಾಲಕ್ಕೆ ಕುಡಿಯುವ ನೀರನ್ನು ಎಫ್‌ಟಿಕೆ ಕಿಟ್ ಮೂಲಕ ನೀರಿನ ಗುಣಮಟ್ಟವನ್ನು ಪರಿಶೀಲಿಸಬೇಕು ಎಂದು ತಿಳಿಸಿದರು.
ಅಂಗನವಾಡಿಯಲ್ಲಿ ಆಹಾರ ಸೇವನೆ
ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳಿಗೆ ನೀಡುತ್ತಿರುವ ಆಹಾರವನ್ನು ಸ್ವತಃ ತಾವೇ ಸೇವಿಸಿ ಆಹಾರ ಗುಣಮಟ್ಟವನ್ನು ಗಾಯತ್ರಿ ಪರಿಶೀಲಿಸಿದರು. ಕಾಲಕಾಲಕ್ಕೆ ಮಕ್ಕಳಿಗೆ ತೂಕ, ಎತ್ತರ, ಆರೋಗ್ಯ ತಪಾಸಣೆ ನಡೆಸುವಂತೆ ತಿಳಿಸಿದರು. ಅಂಗನವಾಡಿ ಕೇಂದ್ರದಲ್ಲಿ 3 ವರ್ಷದ ಒಳಗಿನ ಮಕ್ಕಳು ಕಂಡು ಬಂದಿದ್ದರಿಂದ ಆ ಮಕ್ಕಳನ್ನು ಕೂಸಿನ ಮನೆಗೆ ಸೇರಿಸುವಂತೆ ಸೂಚಿಸಿದರು.
ಕೇತುಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶೌಚಗೃಹ, ಆಟದ ಮೈದಾನ, ಶಾಲಾ ಕಾಂಪೌಂಡ್, ಶಾಲಾ ಕೊಠಡಿಗಳನ್ನು ಪರಿಶೀಲಿಸಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಮಕ್ಕಳಿಗೆ ಪರಿಸರ, ನೈರ್ಮಲ್ಯ ಕುರಿತು ಮಾಹಿತಿ ನೀಡಿ ಎಲ್ಲ ಮಕ್ಕಳು ಒಂದೊಂದು ಗಿಡವನ್ನು ತಮ್ಮ ತಮ್ಮ ಮನೆಯ ಜಾಗದಲ್ಲಿ ನೆಡುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸೇನಾಪತಿಹಳ್ಳಿ ಗ್ರಾಮದ ಹಾಲಿನ ಡೈರಿಯ ಮುಂದೆ 15ನೇ ಹಣಕಾಸು ಯೋಜನೆಯಲ್ಲಿ ನಿರ್ಮಾಣವಾಗಿದ್ದ ಚರಂಡಿ ಕಾಮಗಾರಿಯನ್ನು ಪರಿಶೀಲಿಸಿದರು.
ನಂತರ ಸಂಜೀವಿನಿ ಘಟಕಕ್ಕೆ ಭೇಟಿ ನೀಡಿ ಸ್ವಸಹಾಯ ಸಂಘಗಳ ಕಾರ್ಯವೈಖರಿ ಕುರಿತು ಮಾಹಿತಿ ಪಡೆದುಕೊಂಡ ಅವರು, ಸ್ವಸಹಾಯ ಸಂಘದ ಮಹಿಳೆಯರು ಸ್ವಉದ್ಯೋಗಗಳನ್ನು ಮಾಡುವುದರ ಮೂಲಕ ಆರ್ಥಿಕವಾಗಿ ಮುನ್ನಡೆಯಬೇಕು ಎಂದು ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ರಂಜಿತ್, ಕಾರ್ಯನಿರ್ವಾಹಕ ಅಧಿಕಾರಿ ಪಿ.ಎಸ್.ಅನಂತರಾಜು, ಪಿಆರ್‌ಇಡಿ ಇಲಾಖೆಯ ಇಇ ವೀರೇಶ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಹರ್ಷದ್ ಪಾಷಾ, ತಾಲೂಕು ಯೋಜನಾಧಿಕಾರಿ ರಂಗಸ್ವಾಮಿ, ಪಿಡಿಒ ರವೀಂದ್ರ, ಕಾರ್ಯದರ್ಶಿ ಆಶಾಲತಾ ಹಾಗೂ ಸಿಬ್ಬಂದಿ ಇದ್ದರು.