ಅಭಿವೃದ್ಧಿ ಕಾಣುತ್ತಿದೆ ಬೊಮ್ಮಸಂದ್ರ ಕೆರೆ, ಕೈಗಾರಿಕಾ ಸಂಘ ಹಾಗೂ ವಿವಿಧ ಕಂಪನಿಗಳ ಸಹಕಾರ

IMG-20210325-WA0049
Published on

ನವೀನ್‌ಚಂದ್ರ ಶೆಟ್ಟಿ ಆನೇಕಲ್

ಕೆಲದಿನಗಳ ಹಿಂದಿನವರೆಗೂ ಕೊಳಚೆ ನೀರು ತುಂಬಿಕೊಂಡು ದುರ್ನಾತ ಬೀರುತ್ತಿದ್ದ ಬೊಮ್ಮಸಂದ್ರ ಕೆರೆ ಈಗ ಸ್ವಚ್ಛಗೊಂಡು, ಪ್ರವಾಸಿಗರನ್ನು ಸೆಳೆಯಲು ಸಜ್ಜಾಗುತ್ತಿದೆ.

ಪುರಸಭೆ ಅಧಿಕಾರಿಗಳು ಬೊಮ್ಮಸಂದ್ರ ಕೈಗಾರಿಕಾ ಸಂಘ ಹಾಗೂ ಸುತ್ತಮುತ್ತಲ ಕಂಪನಿಗಳ ಸಹಕಾರದಿಂದ ಕೆರೆಯನ್ನು ಸ್ವಚ್ಛಗೊಳಿಸಲಾಗುತ್ತಿದ್ದು, ಕೆಲವೇ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.

ಬೊಮ್ಮಸಂದ್ರ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಿರುವ ಕಿತ್ತಗಾನಹಳ್ಳಿಯಲ್ಲಿ 28 ಎಕರೆ ವಿಸ್ತೀರ್ಣದ ಕೆರೆ ಇದೆ. ಕೈಗಾರಿಕಾ ಪ್ರದೇಶದ ವಿವಿಧ ಕೈಗಾರಿಕೆಗಳು ಕೆರೆಯ ಒಡಲಿಗೆ ಕಲುಷಿತ ನೀರು ಹಾಗೂ ಕಸ ಸುರಿಯುತ್ತಿದ್ದವು. ಈಗ ಈ ಕಾರ್ಯಕ್ಕೆ ಇತಿಶ್ರೀ ಹಾಡಿದ್ದು, ಕೆರೆ ಅಭಿವೃದ್ಧಿಪಡಿಸಲು ಹಗಲಿರಳು ಶ್ರಮಿಸುತ್ತಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಬೊಮ್ಮಸಂದ್ರ ಕೈಗಾರಿಕಾ ಸಂಘದ ಅಧ್ಯಕ್ಷ ಎ.ಪ್ರಸಾದ್, ಈ ಹಿಂದೆ ಕೆರೆ ಸಂಪೂರ್ಣ ಕಲುಷಿತಗೊಂಡಿತ್ತು. ಇದನ್ನು ಸ್ವಚ್ಛಗೊಳಿಸುವಂತೆ ಬೊಮ್ಮಸಂದ್ರ ಪುರಸಭೆ ಅಧಿಕಾರಿಗಳಿಗೆ ಕೋರ್ಟ್ ಛೀಮಾರಿ ಹಾಕಿತ್ತು. ಇದಾದ ಬಳಿಕೆ ಎಚ್ಚೆತ್ತುಕೊಂಡ ಆಡಳಿತ, ಬೊಮ್ಮಸಂದ್ರ ಕೈಗಾರಿಕಾ ಸಂಘ, ಸುತ್ತಮುತ್ತಲಿರುವ ಆಸ್ಪತ್ರೆಗಳು ಮತ್ತು ಕೈಗಾರಿಕೆಗಳ ಸಹಕಾರದಲ್ಲಿ ಕೆರೆ ಸ್ವಚ್ಛಗೊಳಿಸುವ, ಹೂಳು ಎತ್ತುವ ಕಾಮಗಾರಿ ಕೈಗೊಳ್ಳುತ್ತಿದೆ ಎಂದರು.

ಕಳೆದ ವರ್ಷ ಅಕ್ಟೋಬರ್ 10ರಂದು ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಈ ವರ್ಷದ ಮೇ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಆ ಬಳಿಕ ಎಂದಿನ ಸೌಂದರ್ಯವನ್ನು ಮರಳಿ ಪಡೆದುಕೊಳ್ಳಲಿದ್ದು, ಪ್ರವಾಸಿ ತಾಣವಾಗುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.

10ಕ್ಕೂ ಹೆಚ್ಚು ಜೆಸಿಬಿ ಬಳಕೆ: ಐದು ತಿಂಗಳಿಂದ ಕೆರೆ ಅಭಿವೃದ್ಧಿ ಕಾಮಗಾರಿ ಚುರುಕುಗೊಳಿಸಲಾಗಿದೆ. 10ಕ್ಕೂ ಹೆಚ್ಚು ಜೆಸಿಬಿಗಳು, ಲಾರಿಗಳನ್ನು ಬಳಸಿ, ದಡದಲ್ಲಿದ್ದ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ. ಅಲ್ಲದೆ, ಹೂಳನ್ನೂ ಎತ್ತಲಾಗಿದೆ. ಬೊಮ್ಮಸಂದ್ರ ಕೈಗಾರಿಕಾ ಸಂಘದ ಕೆಲ ಸದಸ್ಯರು ಸ್ವತಃ ಹಾಜರಿದ್ದು, ಕೆರೆ ಅಭಿವೃದ್ಧಿ ಕಾಮಗಾರಿಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಕೇಳುತ್ತಿತ್ತು ಹಕ್ಕಿಗಳ ಕಲರವ: ಈ ಹಿಂದೆ ಬೊಮ್ಮಸಂದ್ರ ಕೆರೆ ಸ್ವಚ್ಛವಾಗಿದ್ದಾಗ ಸೊಬಗಿನ ನೋಟ ಒದಗಿಸುತ್ತಿತ್ತು. ವಲಸೆ ಹಕ್ಕಿಗಳ ಕಲರವ ಸದಾ ಕೇಳಿಬರುತ್ತಿತ್ತು. ಆದರೆ, ಕೆರೆ ನೀರು ಕಲುಷಿತಗೊಳ್ಳಲು ಆರಂಭವಾದ ಬಳಿಕ ವಲಸೆ ಹಕ್ಕಿಗಳ ಕಲರವ ನಿಂತೇ ಹೋಗಿತ್ತು. ಈಗ ಕೆರೆ ಒಡಲು ಸ್ವಚ್ಛವಾಗುತ್ತಿರುವ ಹಿನ್ನೆಲೆಯಲ್ಲಿ ವಲಸೆ ಹಕ್ಕಿಗಳ ಕಲರವ ಮತ್ತೆ ಕೇಳಿಸುವ ಆಶಾಭಾವ ವ್ಯಕ್ತವಾಗುತ್ತಿದೆ.

3 ಲಕ್ಷ ರೂ. ನಿರ್ವಹಣಾ ವೆಚ್ಚ: ಕೆರೆಯ ಸುತ್ತಮುತ್ತ ಕುಳಿತುಕೊಳ್ಳಲು ಸೊಬಗಿನ ನೋಟ ಆಸ್ವಾದಿಸಲು ಅನುವಾಗುವಂತೆ ಹಲವು ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ. ಕೆರೆ ಅಭಿವೃದ್ಧಿ ಅಷ್ಟೇ ಮುಖ್ಯವಲ್ಲ. ಅದರ ನಿರ್ವಹಣೆಯೂ ಮುಖ್ಯ. ತಿಂಗಳಿಗೆ 3 ಲಕ್ಷ ರೂ. ನಿರ್ವಹಣಾ ವೆಚ್ಚ ಬೇಕಾಗುತ್ತದೆ. ಇದಕ್ಕಾಗಿ ಸೂಕ್ತ ಆರ್ಥಿಕ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗುತ್ತಿದೆ. ಕೆರೆಯಂಗಳದಲ್ಲಿರುವ ಸಬಲಮ್ಮ ದೇವಾಲಯವನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ.

ಒಟ್ಟು 17 ಕೋಟಿ ರೂ. ವೆಚ್ಚ: ಕಿತ್ತಗಾನಹಳ್ಳಿ ಕೆರೆ ಸರ್ವೇ ನಂ.254ರಲ್ಲಿ ಈಗಾಗಲೇ ಅಭಿವೃದ್ಧಿ ಭರದಿಂದ ಸಾಗಿದೆ. ಕೆರೆ ಅಭಿವೃದ್ಧಿ ಅಸಾಧ್ಯ ಎಂದೇ ಹಲವರು ಹೇಳುತ್ತಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿ, ದಾನಿಗಳ ಸಹಕಾರದಿಂದ ಅಭಿವೃದ್ಧಿ ಕೈಗೊಳ್ಳುತ್ತಿದ್ದೇವೆ. ಮಾದರಿ ಕೆರೆಯಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಎ.ಪ್ರಸಾದ್ ಹೇಳಿದರು. ಮೊದಲನೇ ಹಂತದಲ್ಲಿ 8 ಕೋಟಿ ರೂ., ಎರಡನೇ ಹಂತದಲ್ಲಿ 8.30 ಕೋಟಿ ರೂ. ಸೇರಿ ಒಟ್ಟು 17 ಕೋಟಿ ರೂ.ಗಳಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಇದೀಗ ಕಾಮಗಾರಿ ಕೊನೆಯ ಘಟ್ಟದಲ್ಲಿದೆ ಎಂದರು.

ಬೊಮ್ಮಸಂದ್ರ ಕೈಗಾರಿಕಾ ಸಂಘಕ್ಕೆ ಸಾಕಷ್ಟು ಕಂಪನಿಗಳು ಸಹಕಾರ ನೀಡಿವೆ. ಪ್ರತಿದಿನ ಕಾಮಗಾರಿಯನ್ನು ಸ್ವತಃ ಪರಿಶೀಲಿಸುತ್ತಿದ್ದೇವೆ. ಹಿಂದೆ ಈ ಕೆರೆಗೆ ವಲಸೆ ಪಕ್ಷಿಗಳು ಬರುತ್ತಿದ್ದವು. ಕೆರೆ ಅಭಿವೃದ್ಧಿಯ ಬಳಿಕ ಇಂಥ ದೃಶ್ಯ ಪುನರಾವರ್ತನೆಗೊಳ್ಳಲಿದೆ. ಕೆರೆ ಮಧ್ಯದಲ್ಲಿ ದ್ವೀಪವನ್ನೂ ನಿರ್ಮಿಸಲಾಗುವುದು. ನಾಗಾರಾಜ್ ಶೆಟ್ಟಿ, ಕೆರೆ ಅಭಿವೃದ್ಧಿ ಕಾಮಗಾರಿ ಮೇಲುಸ್ತುವಾರಿ ಸಿಎಸ್‌ಆರ್ ಯೋಜನೆಯಡಿ ಕಂಪನಿಗಳು ಕೆರೆ ಅಭಿವೃದ್ಧಿಗೆ ಕೈಜೋಡಿಸಿವೆ. ಇದರಿಂದಾಗಿ ಅದು ರಾಜ್ಯದಲ್ಲೇ ಮಾದರಿ ಕೆರೆಯಾಗಿ ಅಭಿವೃದ್ಧಿ ಹೊಂದುತ್ತಿದೆ. ಮುರಳೀಧರ್, ಬೊಮ್ಮಸಂದ್ರ ಕೈಗಾರಿಕಾ ಸಂಘದ ಸಹಕಾರ್ಯದರ್ಶಿ ಕಿತ್ತಗಾನಹಳ್ಳಿ ಕೆರೆ ಸಂಪೂರ್ಣ ಕಲುಷಿತಗೊಂಡಿತ್ತು. ಕೈಗಾರಿಕಾ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಹೆಚ್ಚಿನ ಕಾಳಜಿ ವಹಿಸಿ ಎಲ್ಲರ ಸಹಕಾರದೊಂದಿಗೆ ಅದನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಬಿ.ರಾಮಲಿಂಗಾರೆಡ್ಡಿ, ಶಾಸಕ, ಮಾಜಿ ಸಚಿವ ಯಾವುದೇ ಕೆಲಸ ಮಾಡಬೇಕಾದರೆ ಕಾಳಜಿ ಮುಖ್ಯ. ಕೈಗಾರಿಕೆಗಳ ಮಾಲೀಕರನ್ನು ಕೇಳಿಕೊಂಡಾಗ, ಸಹಕರಿಸುವ ಭರವಸೆ ನೀಡಿದರು. ಇದರಿಂದಾಗಿ ಕೆರೆ ಈಗ ಹೊಸ ರೂಪು ಪಡೆದುಕೊಳ್ಳುತ್ತಿದೆ. ಬಿ.ಶಿವಣ್ಣ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net