

ಪಾಂಡವಪುರ: ನಾಡಪ್ರಭು ಕೆಂಪೇಗೌಡರ ಪ್ರತಿಮೆ ಹಾಗೂ ಗೋಪುರ ನಿರ್ಮಾಣಕ್ಕೆ ನಾಡಿನಾದ್ಯಂತ ಪವಿತ್ರ ಮಣ್ಣು ಸಂಗ್ರಹ ಅಭಿಯಾನದ ರಥ ಪಟ್ಟಣಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಸ್ತ್ರೀಶಕ್ತಿ ಸ್ವಹಾಯ ಸಂಘದ ಮಹಿಳೆಯರು, ತಾಲೂಕು ಕಚೇರಿ ಮತ್ತು ಪುರಸಭೆಯ ಅಧಿಕಾರಿಗಳು ಶುಕ್ರವಾರ ಪೂರ್ಣಕುಂಭ ಸ್ವಾಗತ ಕೋರಿದರು.
ಕಳೆದ ಎರಡು ದಿನಗಳಿಂದ ತಾಲೂಕಿನ ಚಿನಕುರಳಿ, ನಾರಾಯಣಪುರ, ಬಳಘಟ್ಟ, ಮೇಲುಕೋಟೆ, ಜಕ್ಕನಹಳ್ಳಿ, ಮಾಣಿಕ್ಯನಹಳ್ಳಿ, ಹಳೆಬೀಡು, ಸುಂಕಾತೊಣ್ಣೂರು, ಲಕ್ಷ್ಮೀಸಾಗರ, ಟಿ.ಎಸ್.ಛತ್ರ, ಹಿರೇಮರಳಿ, ಪಾಂಡವಪುರ ಪಟ್ಟಣ, ಕೆನ್ನಾಳು, ಕೆ.ಬೆಟ್ಟಹಳ್ಳಿ, ಹೊನಗಾನಹಳ್ಳಿ, ಗುಮ್ಮನಹಳ್ಳಿ, ಡಿಂಕಾ, ಬನ್ನಂಗಾಡಿ, ಅರಳಕುಪ್ಪೆ, ಹರವು, ಅರಳಕುಪ್ಪೆ ಹಾಗೂ ಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸಂಚರಿಸಿದ ಕೆಂಪೇಗೌಡ ರಥಕ್ಕೆ ಗ್ರಾಮಸ್ಥರು ಪುಷ್ಪಾರ್ಚನೆ ಮಾಡಿ ಬರಮಾಡಿಕೊಂಡರು.
ಹಾರೋಹಳ್ಳಿಯ ಮಂಟೇಸ್ವಾಮಿ ಮತ್ತು ಮಸಣದಮ್ಮ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಸದಸ್ಯರು, ಅಂಗನವಾಡಿ ಕಾರ್ಯಕರ್ತರು ರಥದೊಂದಿಗೆ ಕಳಸ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಈ ವೇಳೆ ಪುರಸಭೆ ಅಧ್ಯಕ್ಷೆ ವಿ.ಕೆ.ಅರ್ಚನಾ ಚಂದ್ರು, ಮುಖ್ಯಾಧಿಕಾರಿ ವೀಣಾ, ಸದಸ್ಯರಾದ ಎಲ್.ಅಶೋಕ್, ಶ್ರೀನಿವಾಸನಾಯಕ, ಶಿವಕುಮಾರ್, ಇಂಜಿನಿಯರ್ ಚೌಡಪ್ಪ, ಅಧಿಕಾರಿಗಳಾದ ಕಾಳಯ್ಯ, ಪಳನಿಸ್ವಾಮಿ, ಮಣಿಪ್ರಸಾದ್ ಇತರರು ಇದ್ದರು.