

ಮೈಸೂರು: ಅಭಿಯಂತರರು ಸಂಸ್ಥೆಯ 30ನೇ ವಾರ್ಷಿಕೋತ್ಸವ ಪ್ರಯುಕ್ತ ನಗರದ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ‘ರಂಗ ಸಂಭ್ರಮ’ಕ್ಕೆ ಶುಕ್ರವಾರ ಚಾಲನೆ ದೊರೆಯಿತು.
ಮೊದಲ ದಿನ ಕೆ.ವಿ. ಸುಬ್ಬಣ್ಣ ರಚನೆಯ ಮಂಜುನಾಥ್ ಬಡಿಗೇರ್ ನಿರ್ದೇಶನದ ಸೂಳೇ ಸನ್ಯಾಸಿ ನಾಟಕ ಪ್ರದರ್ಶನಗೊಂಡಿತು. ಡಿ.9 ರಂದು ಸಂಜೆ 7ಕ್ಕೆ ರಾಜೇಂದ್ರ ಕಾರಂತ್ ರಚಿಸಿ, ನಿರ್ದೇಶಿಸಿರುವ ‘ಮಲ್ಲಿಗೆ ತೋಟದಲ್ಲಿ ಮರ್ಡರ್’ ನಾಟಕ, 10 ರಂದು ಸಂಜೆ 7ಕ್ಕೆ ಪೂರ್ಣಚಂದ್ರ ತೇಜಸ್ವಿ ರಚನೆಯ (ರಂಗರೂಪ-ಸಿ. ಬಸವಲಿಂಗಯ್ಯ), ಎಚ್.ಎಸ್. ಸುರೇಶ್ ಬಾಬು ನಿರ್ದೇಶನದ ‘ಚಿದಂಬರ ರಹಸ್ಯ’ ನಾಟಕ ಪ್ರದರ್ಶನಗೊಳ್ಳಲಿದೆ.
ರಂಗಸಂಭ್ರಮಕ್ಕೆ ಚಾಲನೆ ನೀಡಿದ ಸಾಹಿತಿ ಪ್ರೊ. ಕಾಳೇಗೌಡ ನಾಗವಾರ ಮಾತನಾಡಿ, ವೃತ್ತಿಯಲ್ಲಿನ ಏಕತಾನತೆ ದೂರ ಮಾಡಲು ರಂಗಭೂಮಿಯ ಅವಶ್ಯಕತೆ ಇದೆ. ಇದೇ ಉದ್ದೇಶಕ್ಕೆ ಪ್ರಾರಂಭವಾದ ಅಭಿಯಂತರರು ಸಂಸ್ಥೆ ಹಲವು ರಂಗಪ್ರಯೋಗ ಮಾಡಿರುವುದು ಸಂತಸದ ವಿಚಾರ. ವಿವಿಧ ವೃತ್ತಿಯಲ್ಲಿ ತೊಡಗಿರುವವರಿಗೆ ಕಲೆ, ಸಾಹಿತ್ಯ, ಸಂಸ್ಕೃತಿಯ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ಅಭಿಯಂತರರು ಸಂಸ್ಥೆ ಅಧ್ಯಕ್ಷ ಎಚ್.ಎಸ್. ಸುರೇಶ್ ಬಾಬು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್, ರಂಗಕರ್ಮಿ ರಾಜಶೇಖರ ಕದಂಬ ಇದ್ದರು.