ಅಭಿಮಾನಿಗಳ ಪ್ರೋತ್ಸಾಹವೇ ಕಲಾವಿದರ ಜೀವನ

29sirsi1
Published on

ಶಿರಸಿ: ಕಲಾಭಿಮಾನಿಗಳ ನಿಜವಾದ ಪೋ›ತ್ಸಾಹವು ಕಲಾವಿದರ ಜೀವನವಾಗಿದೆ ಎಂದು ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಹೇಳಿದರು. ಎಂಟು ತಿಂಗಳ ನಂತರ ಜೇವರ್ಗಿ ನಾಟಕ ಕಂಪನಿ ಪ್ರದರ್ಶನಕ್ಕೆ ಶನಿವಾರ ಸಂಜೆ ಚಾಲನೆ ನೀಡಿದ ಅವರು, ಮಾರಿಕಾಂಬಾ ಜಾತ್ರೆ ಮುಗಿಯುತ್ತಿದ್ದಂತೆ ಕರೊನಾ ಮಹಾರೋಗ ಆವರಿಸಿ ಎಲ್ಲ ಚಟುವಟಿಕೆಗಳು ಸ್ಥಬ್ಧಗೊಂಡಿದ್ದವು. ಈ ವೇಳೆ ಕಲಾಸೇವೆಯಲ್ಲಿ ತೊಡಗಿದ್ದ ಹಲವು ಕಲಾವಿದರು ಸಂಕಷ್ಟಕ್ಕೆ ಸಿಲುಕಿ ನಷ್ಟ ಅನುಭವಿಸಿದ್ದಾರೆ. ಕೆಲವು ಕಲಾವಿದರು ಕೂಲಿ ಮಾಡಿ ಕುಟುಂಬ ನಿರ್ವಹಣೆ ಮಾಡುವ ದುಸ್ಥಿತಿ ತಲುಪಿದ್ದರು. ಇಂಥ ಸಂದರ್ಭದಲ್ಲಿ ಹಲವು ದಾನಿಗಳು ಕಲಾವಿದರಿಗೆ ಸಹಾಯ ಹಸ್ತ ಚಾಚಿದ್ದರು. ಇದರಿಂದ ತಾತ್ಕಾಲಿಕವಾಗಿ ಕಲಾವಿದರು ಜೀವನ ಸಾಗಿಸಿಲು ಅನುಕೂಲವಾಗಿತ್ತು. ಆದರೆ ಕಲಾವಿದರ ಜೀವನ ಇರುವುದು ಅವರ ಕಲಾ ಪ್ರದರ್ಶನದಲ್ಲಾಗಿದೆ. ಹಾಗಾಗಿ ಇದೀಗ ಮತ್ತೆ ನಾಟಕ ಪ್ರದರ್ಶನ ಪ್ರಾರಂಭವಾಗಿದೆ. ಕಲಾಭಿಮಾನಿಗಳು ನಾಟಕವನ್ನು ವೀಕ್ಷಿಸಿ ಕಲಾವಿದರಿಗೆ ನೆರವಾಗಬೇಕಿದೆ ಎಂದರು. ಉದ್ಯಮಿ ಉಪೇಂದ್ರ ಪೈ ಮಾತನಾಡಿ, ಸಾಂಸ್ಕೃತಿಕ ನಗರವಾದ ಶಿರಸಿಯಲ್ಲಿ ಕಲಾವಿದರನ್ನು ಬೆಳೆಸುವ ಜನರಿದ್ದಾರೆ. ಕಲೆ ಎಷ್ಟು ಮುಖ್ಯವೋ ಕಲಾವಿದನೂ ಅಷ್ಟೇ ಮುಖ್ಯ. ಕಲಾವಿದನಿದ್ದರೆ ಮಾತ್ರ ಆ ಕಲೆಗೊಂದು ಗೌರವ ಸಿಗುತ್ತದೆ. ಅಂಥ ಕಲಾವಿದರ ಪ್ರತಿಭೆಯನ್ನು ಕಲಾಸಕ್ತರು ಗೌರವಿಸಬೇಕು ಎಂದರು. ನಗರಸಭೆ ಸದಸ್ಯೆ ದೀಪಾ ಮಹಾಲಿಂಗಣ್ಣ, ಪ್ರಮುಖರಾದ ಅಜಿತ ನಾಡಿಗ, ಕಲಾವಿದರಾದ ದಯಾನಂದ ಬಿಳಗಿ, ನಾಟಕ ಕಂಪನಿ ಪ್ರಮುಖ ಶರತ ಕುಂಬ್ಳೆ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net