

ಹುಣಸೂರು; ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದಾದ್ಯಂತ ಎಲ್ಲೆಂದರಲ್ಲಿ ಕನ್ನಡ ಬಾವುಟದ್ದೇ ದರ್ಬಾರ್.. ಪ್ರಮುಖ ಬೀದಿಗಳಲ್ಲಿ ಬಂಟಿಂಗ್ಸ್, ಬ್ಯಾನರ್‌ಗಳು, ದೊಡ್ಡದಾದ ಬಾವುಟಗಳ ಹಾರಾಟ..20ಕ್ಕೂ ಹೆಚ್ದು ಸ್ತಬ್ಧಚಿತ್ರಗಳ ಮೆರವಣಿಗೆ..ವಿದ್ಯಾರ್ಥಿಗಳ ಸಂಭ್ರಮ..
ಹುಣಸೂರು ನಗರದಲ್ಲಿ ಕಂಡುಬಂದ ರಾಜ್ಯೋತ್ಸವದ ಸಂಭ್ರಮದ ದೃಶ್ಯಗಳಿವು. ಮಂಗಳವಾರ ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ವರ್ಣಿತ್ ನೇಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರೆ, ಶಾಸಕ ಎಚ್.ಪಿ.ಮಂಜುನಾಥ್ ಕನ್ನಡ ಧ್ವಜಾರೋಹಣ ಮಾಡಿ ರಾಜ್ಯೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ನಗರದ ಕಲ್ಕುಣಿಕೆಯ ರಂಗನಾಥ ಬಡಾವಣೆಯಿಂದ ಸ್ತಬ್ಧಚಿತ್ರಗಳ ಮೆರವಣಿಗೆಗೆ ಶಾಸಕ ಎಚ್.ಪಿ.ಮಂಜುನಾಥ್ ಚಾಲನೆ ನೀಡಿದರು.
ಬಾವುಟದ ಹಬ್ಬವಾಗದಿರಲಿ: ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶಾಸಕ ಎಚ್.ಪಿ.ಮಂಜುನಾಥ್, ನ.1 ರಂದು ಕನ್ನಡ ಬಾವುಟ ಹಾರಿಸಿ ರಾಜ್ಯೋತ್ಸವ ಆಚರಣೆ ಮಾಡುವುದಕಷ್ಟೇ ಸೀಮಿತವಾಗಬಾರದು. ಭಾಷೆಯೊಂದು ಅನ್ನನೀಡುವಂತಾದರೆ ಭಾಷೆಯ ಬಗೆಗಿನ ಅಭಿಮಾನ ಮತ್ತಷ್ಟು ಬೆಳೆಯುತ್ತದೆ. ಕನ್ನಡವೂ ಅನ್ನನೀಡುವ ಭಾಷೆಯಾಗಿದ್ದು, ಅದರ ಸದ್ಬಳಕೆ ನಮ್ಮಿಂದಾಗುತ್ತಿಲ್ಲ. ಅಭಿಮಾನಶೂನ್ಯರು ಎನ್ನುವ ಹಣೆಪಟ್ಟಿ ತೊರೆದು ಭಾಷೆಗಾಗಿ ದುಡಿಯೋಣ ಎಂದರು.
ಉಪವಿಭಾಗಾಧಿಕಾರಿ ವರ್ಣಿತ್ ನೇಗಿ ಮಾತನಾಡಿದರು. ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ನಗರಸಭಾಧ್ಯಕ್ಷೆ ಗೀತಾ ನಿಂಗರಾಜು, ಡಿವೈಎಸ್‌ಪಿ ರವಿಪ್ರಸಾದ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯರಾದ ಎಸ್.ಜಯರಾಂ, ಪಿ.ಆರ್.ರಾಚಪ್ಪ, ಸುಬ್ಬಣ್ಣ ಸೇರಿದಂತೆ ವಿವಿದ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ಮನಸೆಳೆದ ಸ್ತಬ್ಧಚಿತ್ರಗಳು: ರಾಜ್ಯೋತ್ಸವದಲ್ಲಿ 20ಕ್ಕೂ ಹೆಚ್ಚು ಸ್ತಬ್ಧಚಿತ್ರಗಳು ಪಾಲ್ಗೊಂಡಿದ್ದವು. ಸಂತ ಜೋಸೆಫರ ಕಾಲೇಜಿನಿಂದ ವಿಜಯನಗರ ಸಾಮ್ರಾಜ್ಯ, ಕ್ರೈಸ್ಟ್ ಸ್ಕೂಲಿನಿಂದ ತಾಲೂಕಿನ ಪ್ರಸಿದ್ಧ ಗದ್ದಿಗೆ ಕೆಂಡಗಣ್ಣೇಶ್ವರಸ್ವಾಮಿ ದೇವಾಲಯ, ರೋಟರಿ ವಿದ್ಯಾಸಂಸ್ಥೆಯಿಂದ ಮೈಸೂರು ಸಂಸ್ಥಾನ, ಕಾವೇರಿ ವಿದ್ಯಾಸಂಸ್ಥೆಯಿಂದ ಹಾರಂಗಿ ಡ್ಯಾಂ, ಮಾರೀಗುಡಿ ಬೀದಿಯ ವೀರ ಸಂಗೊಳ್ಳಿ ರಾಯಣ್ಣ ಯುವಬಳಗದಿಂದ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಮಹಿಷ ಮರ್ದಿನಿ, ಗ್ರಾಮೀಣಾಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಕಾರ್ಯಕ್ರಮಗಳನ್ನೊಳಗೊಂಡ ಸ್ತಬ್ಧ ಚಿತ್ರಗಳು ನೋಡುಗರು ಮನಸೂರೆಗೊಂಡವು. ಕಟ್ಟೆಮಳಲವಾಡಿಯ ಹಿರಿಯರ ಕೋಲಾಟ ತಂಡ, ಗಾವಡಗೆರೆಯ ನೆಹರು ಯುವಕೇಂದ್ರದಿಂದ ಡೊಳ್ಳುಕುಣಿತ, ಚೆಂಡೆವಾದನ, ಬ್ರಿಲಿಯನ್ಸ್ ಶಾಲೆಯ ಮಕ್ಕಳಿಂದ ವೀರಗಾಸೆ ಮುಂತಾದವು ಮೆರವಣಿಗೆಯ ರಂಗನ್ನು ಮತ್ತಷ್ಟು ಹೆಚ್ಚಿಸಿದವು.
ವೃತ್ತಗಳಲ್ಲಿ ಕನ್ನಡದ ಕಂಪು: ನಗರದ ಕಲ್ಪತರು ವೃತ್ತ, ಹಳೇ ಬಸ್ ನಿಲ್ದಾಣ, ಟ್ಯಾಕ್ಸಿ ಸ್ಟಾಂಡ್, ಅಕ್ಷಯಭಂಡಾರ್ ವೃತ್ತ, ಸಂವಿಧಾನ ವೃತ್ತ, ಧ್ರುವ ಪೆಟ್ರೊಲ್ ಬಂಕ್ ವೃತ್ತ, ವಿಶ್ವೇಶ್ವರಯ್ಯ ವೃತ್ತ, ಪಾಂಡುರಂಗ ಸ್ವಾಮಿ ದೇವಾಲಯ, ಎಚ್.ಡಿ.ಕೋಟೆ ವೃತ್ತ, ವಿವಿಧ ವೃತ್ತಗಳಲ್ಲಿನ ಆಟೋ ಸ್ಟ್ಯಾಂಡ್‌ಗಳಲ್ಲಿ ತಾಯಿ ಭುವನೇಶ್ವರಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ವಿಶ್ವೇಶ್ವರಯ್ಯ ವೃತ್ತದಲ್ಲಿ ಕೈಲಾಸಪರ್ವತದ ಮಾದರಿ ನಿರ್ಮಿಸಿ ಶಿವಪಾರ್ವತಿಯರನ್ನು ಇರಿಸಲಾಗಿದ್ದು, ಮಾದರಿಯನ್ನು ನೋಡಲು ನಾಗರಿಕರು ಮುಗಿಬಿದ್ದಿದ್ದರು. ಈ ಬಾರಿ ವೃತ್ತಗಳನ್ನು ಆಕರ್ಷಕವಾಗಿ ಅಲಂಕರಿಸಿದವರಿಗೆ, ವಿಶಿಷ್ಟವಾಗಿ ಸ್ತಬ್ಧಚಿತ್ರಗಳನ್ನು ನಿರ್ಮಿಸಿದವರಿಗೆ ಶಾಸಕ ಎಚ್.ಪಿ.ಮಂಜುನಾಥ್ 50 ಸಾವಿರ ರೂ. ಪ್ರಥಮ ಬಹುಮಾನ, 25 ಸಾವಿರ ರೂ. ದ್ವಿತೀಯ ಮತ್ತು 10 ಸಾವಿರ ರೂ.ಗಳ ತೃತೀಯ ಬಹುಮಾನ ಘೋಷಿಸಿದ್ದು, ಎಲ್ಲೆಡೆ ಪೈಪೋಟಿ ಹೆಚ್ಚಾಗಿತ್ತು.