ಅಭಿಮನ್ಯುಗೆ ಇದುವೇ ಕೊನೇ ದಸರಾ?

mysore
Published on

ಮಂಜುನಾಥ ತಿಮ್ಮಯ್ಯ ಮೈಸೂರು

ಬರೋಬರಿ 750 ಕೆ.ಜಿ.ತೂಕದ ಚಿನ್ನ ಲೇಪಿತ ಅಂಬಾರಿಯಲ್ಲಿ ವಿರಾಜಮಾನವಾಗಿದ್ದ ಚಾಮುಂಡೇಶ್ವರಿ ಮೂರ್ತಿಯನ್ನು ಹೊತ್ತು ರಾಜಪಥದಲ್ಲಿ ಸಾಗಿದ ಗಜನಾಯಕ ಅಭಿಮನ್ಯು ಆನೆಗೆ ಇದು ಕೊನೆ ದಸರಾವೇ?

ಇಂತಹವೊಂದು ಪ್ರಶ್ನೆ ಇದೀಗ ಮೂಡಿದೆ. ಅರಣ್ಯ ಇಲಾಖೆಯ ಮೂಲಗಳು ಇದನ್ನು ಪುಷ್ಟಿಕರಿಸುತ್ತಿವೆ. 60 ವರ್ಷ ವಯೋಮಾನ ಮೀರಿದ ಆನೆಯನ್ನು ಅಂಬಾರಿ ಹೊರಲು ಬಳಕೆ ಮಾಡುವುದಿಲ್ಲ. ಹೀಗಾಗಿ, ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯು ಈ ಜವಾಬ್ದಾರಿಯಿಂದ ವಿಮುಕ್ತರಾಗುವ ಸಾಧ್ಯತೆ ಇದೆ. ಇದು ದಸರಾದಲ್ಲಿ ಮುಂದೆಯೂ ಪಾಲ್ಗೊಳ್ಳಲಿದೆ. ಆದರೆ, ಅಂಬಾರಿ ಹೊರುವುದಿಲ್ಲ.

ಇದಕ್ಕೂ ಹಿಂದಿನ ಅಂಬಾರಿ ಆನೆಯಾಗಿದ್ದ ಅರ್ಜುನ ಆನೆಗೂ 60 ವರ್ಷಕ್ಕೆ ನಿವೃತ್ತಿ ನೀಡಿ, ದಸರಾದಲ್ಲಿ ಸಕ್ರಿಯವಾಗಿ ಇರುವಂತೆ ನೋಡಿಕೊಳ್ಳಲಾಗುತ್ತಿತ್ತು. ಅದೇ ರೀತಿ ಅಭಿಮನ್ಯು ಸಹ ದಸರೆಯಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಲಾಗುತ್ತದೆ.

ಅಭಿಮನ್ಯು ಆನೆ ವಿಜಯದಶಮಿ ಮೆರವಣಿಗೆಯಲ್ಲಿ 6ನೇ ಬಾರಿಗೆ ಅಂಬಾರಿ ಯಶಸ್ಸಿಯಾಗಿ ಹೊತ್ತು ಸೈ ಎನಿಸಿಕೊಂಡಿದೆ. ಜನಸಮೂಹ ಕಂಡು ಗಲಿಬಿಲಿಗೆ ಒಳಗಾಗದ ಇದು ಶಾಂತಚಿತ್ತವಾಗಿ ಅರಮನೆಯಿಂದ ಬನ್ನಿಮಂಟಪದ ವರೆಗೆ ಅಂದಾಜು 5 ಕಿ.ಮೀ. ದೂರವನ್ನು 2.10 ಗಂಟೆಯಲ್ಲಿ ಗುರಿ ತಲುಪಿದ್ದಾನೆ.

ಇದರ ಮೇಲೆ ಜನರು, ಅರಣ್ಯ ಇಲಾಖೆಯವರು ಇಟ್ಟಿದ್ದ ನಂಬಿಕೆ ಉಳಿಸಿಕೊಂಡು ಮೆಚ್ಚುಗೆ ಪಡೆದುಕೊಂಡಿದ್ದಾನೆ. ಇದರೊಂದಿಗೆ ಎಲ್ಲರಿಗೂ ಇಷ್ಟವಾಗಿರುವ ಅಭಿಮನ್ಯು ಮುಂದಿನ ವರ್ಷ ಅಂಬಾರಿ ಹೊರಲು ಸಾಧ್ಯವಾಗುವುದಿಲ್ಲ.

ಇದು ಮುಂದಿನ ವರ್ಷಕ್ಕೆ 60 ಪೂರೈಸಲಿದೆ. ಹೀಗಾಗಿ, 60 ವರ್ಷವಾದ ಆನೆಯ ಮೇಲೆ ಅಂಬಾರಿ ಹೊರಿಸುವಂತಿಲ್ಲ. ಈ ಕುರಿತು ಕೋರ್ಟ್ ಆದೇಶ ಇದೆ. ಆದ್ದರಿಂದ ಮುಂದಿನ ವರ್ಷಕ್ಕೆ ಹೊಸ ಆನೆಯನ್ನು ಅಂಬಾರಿ ಹೊರಲು ಸಜ್ಜುಗೊಳಿಸಬೇಕಾದ ಅನಿವಾರ್ಯ ಇದೆ. ಹೀಗಾಗಿ, ಈ ಸಲವೇ ಅಭಿಮನ್ಯು ಆನೆ ಅಂಬಾರಿ ಹೊರುವ ಕಾಯಕದಿಂದ ವಿದಾಯ ಹೇಳಿದಂತಾಗಿದೆ.

ಈ ಆನೆಯನ್ನು 1970ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಯಿತು. ಇದರ ವಿಶೇಷತೆ ಎಂದರೆ ಕೇವಲ ಪಳಗಿದ ಆನೆ ಮಾತ್ರವಲ್ಲ, ಇತರ ಕಾಡಾನೆ, ಹುಲಿಗಳನ್ನು ಸೆರೆಹಿಡಿಯುವ, ಪಳಗಿಸುವ ಹಾಗೂ ಚಿಕಿತ್ಸೆ ನೀಡುವ ಶಕ್ತಿಶಾಲಿ ಸಾಮರ್ಥ್ಯ ಹೊಂದಿದೆ.

ಅಂದಿನಿಂದ ಅಪಾರ ಅನುಭವ ಗಳಿಸಿದ ಈ ಆನೆ, ಈ ವರೆಗೆ 140-150 ಕಾಡಾನೆಗಳು ಮತ್ತು 40-50 ಹುಲಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಗಳಲ್ಲಿ ಯಶಸ್ವಿಯಾಗಿ ಪಾಲ್ಗೊಂಡಿದೆ.

2012ರಿಂದ ಮೈಸೂರು ದಸರಾ ಮಹೋತ್ಸವದಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದು, 2015ರ ವರೆಗೆ ವಾದ್ಯಗೋಷ್ಠಿಯ ಗಾಡಿಯನ್ನು ಎಳೆಯುವ ಪ್ರಮುಖ ಜವಾಬ್ದಾರಿ ನಿಭಾಯಿಸಿದೆ. ಇತ್ತೀಚಿನ ವರ್ಷಗಳಿಂದ ಈ ಆನೆಗೆ ಅಂಬಾರಿ ಹೊರುವ ಗೌರವ ಇದಕ್ಕೆ ದೊರೆತಿತ್ತು. ತನ್ನ ಶಿಸ್ತು, ಶಕ್ತಿಯುತ ದೇಹಾಕಾರ, ಅನುಭವದ ಮೇಲೆ ಆಧಾರಿತವಾಗಿ, ಇದು ಅಂಬಾರಿ ಆನೆ ಎಂಬ ಅಲಂಕಾರಿಕ ಸ್ಥಾನ ಭರಿಸಿ ಮೆಚ್ಚುಗೆ ಗಿಟ್ಟಿಸಿಕೊಂಡಿತ್ತು. ಈ ಸ್ಥಾನದಲ್ಲಿ ಇದನ್ನು ಇನ್ನೂ ನೋಡಲು ಸಿಗುವುದಿಲ್ಲ.

ಮೂರು ಹೊಸ ಆನೆಗಳಿಗೆ ಪೂರ್ಣಾಂಕ

ಹೊಸ ಆನೆಗಳಾದ ಶ್ರೀಕಂಠ, ರೂಪಾ ಮತ್ತು ಹೇಮಾವತಿಗೆ ಇದುವೇ ಮೊದಲ ದಸರಾವಾಗಿದೆ. ಮೆರವಣಿಗೆಯಲ್ಲಿ ಶ್ರೀಕಂಠ ಚಾಮರಾಜವೃತ್ತದ ಬಳಿ ಒಂದು ಬಾರಿ ವಿಚಲಿತಗೊಂಡಿದ್ದ.

ಇದನ್ನು ಬಿಟ್ಟರೆ ಮೂರು ಆನೆಗಳು ಶಾಂತಚಿತ್ತವಾಗಿ, ಧೈರ್ಯದಿಂದ ತಮ್ಮ ಜವಾಬ್ದಾರಿ ನಿರ್ವಹಿಸಿವೆ. ಮೆರವಣಿಗೆಯ ಮುಂಚೂಣಿಯಲ್ಲಿ ನಿಶಾನೆ ಆನೆ ಧನಂಜಯ್, ನೌಪತ್ ಆನೆಯಾಗಿ ಗೋಪಿಯನ್ನು ಸಾಲಾನೆಗಳಾಗಿ ಮಹೇಂದ್ರ, ಶ್ರೀಕಂಠ, ಲಕ್ಷ್ಮೀ, ಕಂಜನ್, ಭೀಮ, ಏಕಲವ್ಯ, ಪ್ರಶಾಂತ, ಸುಗ್ರೀವ, ಹೇಮಾವತಿ ಗಮನ ಸೆಳೆದಿವೆ. ಕುಮ್ಕಿ ಆನೆಗಳಾಗಿ ಕಾವೇರಿ, ರೂಪಾ ಅಂಬಾರಿ ಹೊತ್ತ ಅಭಿಮನ್ಯು ಆನೆಯನ್ನು ಶಾಂತರೀತಿಯಲ್ಲಿ ವರ್ತನೆ ಮಾಡುವಂತೆ ನೋಡಿಕೊಂಡಿವೆ.

ಅಂಬಾರಿ ಆನೆ ಪಟ್ಟಿ ಇಲ್ಲಿದೆ!

ಸರಿಸುಮಾರು 12 ಆನೆಗಳು ಅಂಬಾರಿಯನ್ನು ಬೆನ್ನಿಗೇರಿಸಿಕೊಂಡು ವೈಭವಪೂರಿತ ದಸರೆಗೆ ಸಾಕ್ಷಿಯಾಗಿವೆ. ಜಯಮಾರ್ತಂಡ, ಐರಾವತ, ರಾಜೇಂದ್ರ, ದ್ರೋಣ, ಬಲರಾಮ, ಅರ್ಜುನ, ಇದೀಗ ಅಭಿಮನ್ಯು ಅಂಬಾರಿ ಹೊತ್ತ ಪ್ರಮುಖ ಆನೆಗಳು.

ಚಿನ್ನದ ಅಂಬಾರಿ ಹೊತ್ತ ಮೊದಲ ಆನೆ ಎಂಬ ಹೆಗ್ಗಳಿಗೆ ಜಯಮಾರ್ತಾಂಡ ಪಾತ್ರವಾಗಿದೆ. ಇದು 45 ವರ್ಷ ಕಾಲ ಅಂದರೆ 1870ರಿಂದ 1915ರ ವರೆಗೆ ಅಂಬಾರಿಯಲ್ಲಿ ಮೂರು ತಲೆಮಾರಿನ ರಾಜರನ್ನು ಹೊತ್ತು ಸಾಗಿದ ಏಕೈಕ ಆನೆ.

ರಾಜರ ಅಚ್ಚುಮೆಚ್ಚಿನ ಆನೆಯಾಗಿದ್ದ ಇದರ ಹೆಸರನ್ನು ಅರಮನೆಯ ಮುಖ್ಯದ್ವಾರಕ್ಕೆ ಹೆಸರು ಇಡಲಾಗಿದೆ. ಈ ದ್ವಾರದ ಮೂಲಕ ಪ್ರತಿ ದಸರಾದಲ್ಲಿ ಜಂಬೂ ಸವಾರಿ ಸಾಗುತ್ತದೆ. ಈತನ ಬಳಿಕ ವಿಜಯಬಹದ್ದೂರ್, ನಂಜುಂಡ, ರಾಮಪ್ರಸಾದ್, ಮೋತಿಲಾಲ್‌ರಾಜ್ ಆನೆಗಳು ಅಂಬಾರಿ ಹೊತ್ತು ಸಾಗಿದ್ದವು.

ಐರಾವತ ಆನೆಯನ್ನು ದಿ ಎಲಿಫಂಟ್ ಬಾಯ್ ಹಾಲಿವುಡ್ ಚಿತ್ರಕ್ಕೆ ಬಳಸಿಕೊಳ್ಳಲಾಗಿತ್ತು. ದೈತ್ಯಾಕಾರದ ಬಿಳಿಗಿರಿ ಆನೆ ಮಹಾರಾಜರನ್ನು ಹೊತ್ತು ಸಾಗಿದ ಕೊನೆಯ ಆನೆ ಎಂಬ ಹಿರಿಮೆ ಪಡೆದುಕೊಂಡಿದೆ.

ರಾಜೇಂದ್ರ ಆನೆ 1977ರಿಂದ ಚಿನ್ನ ಅಂಬಾರಿ ಚಾಮುಂಡಿ ವಿಗ್ರಹ ಇಟ್ಟು ಮೆರವಣಿಗೆ ಮಾಡಲಾಯಿತು. ಇದು ದೇವಿಯನ್ನು ಹೊತ್ತು ಸಾಗಿದ ಮೊದಲ ಆನೆ. ಇದು ಗಂಧದ ಗುಡಿ ಚಿತ್ರದಲ್ಲೂ ಕಾಣಿಸಿಕೊಂಡಿದೆ.

ದ್ರೋಣ ಆನೆ ಸತತ 18 ಬಾರಿ (1980ರಿಂದ 1998) ಅಂಬಾರಿ ಹೊತ್ತಿದ್ದಾನೆ. 1998ರಲ್ಲಿ ಇದು ವಿದ್ಯುತ್ ಅವಘಡದಿಂದ ಮೃತಪಟ್ಟಿತ್ತು. ಶಾಂತ ಸ್ವಭಾವದ ಬಲರಾಮ ಆನೆ 1994ರಿಂದ ದಸರಾದಲ್ಲಿ ಪಾಲ್ಗೊಂಡಿದೆ. 2000ರಿಂದ 2011ರ 11 ವರ್ಷ ಕಾಲ ಅಭಾರಿ ಹೊತ್ತು ಗಜಗಾಂಭೀರ್ಯದಿಂದ ಸಾಗಿತ್ತು.

ದ್ರೋಣ ನಂತರ 1999ರಲ್ಲಿ ಅರ್ಜುನನಿಗೆ ಅಂಬಾರಿ ಕಟ್ಟಲಾಗಿತ್ತು. ಮಾವುತನನ್ನು ಸಾಯಿಸಿದ ಹಿನ್ನೆಲೆಯಲ್ಲಿ 2001ರಿಂದ 2011ರ ವರೆಗೆ ದಸರಾದಲ್ಲಿ ಇದು ಪಾಲ್ಗೊಂಡಿರಲಿಲ್ಲ. 2012ರಿಂದ 2019ರ ವರೆಗೆ ಇದು ಅಂಬಾರಿ ಹೊತ್ತಿತ್ತು. ಈ ಜವಾಬ್ದಾರಿ ಅಭಿಮನ್ಯುನಿಗೆ ವರ್ಗಾವಣೆಯಾಗಿತ್ತು. ಮುಂದಿನ ಸಲ ಬೇರೆ ಆನೆ ಇದು ಹಸ್ತಾಂತರವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net