

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಆಕರ್ಷಣೆಯಾಗಿರುವ ಜಂಬೂ ಸವಾರಿಗೆ ದಿನಗಣನೆ ಆರಂಭವಾಗಿದ್ದು, ಗುರುವಾರ ಅಂಬಾರಿ ಆನೆ ಅಭಿಮನ್ಯು ನೇತೃತ್ವದ ಗಜಪಡೆ ಮೊದಲ ಜಂಬೂ ಸವಾರಿ ತಾಲೀಮು ನಡೆಸಿವೆ. ಗಜಪಡೆಗೆ ಅಶ್ವರೋಹಿದಳದ ಕುದುರೆಗಳು ಸಾಥ್ ನೀಡಿವೆ.
ಕ್ಯಾಪ್ಟನ್ ಅಭಿಮನ್ಯು ಗಜಗಾಂಭೀರ್ಯದಿಂದ ಮುಂದೆ ನಡೆದರೆ ಆತನ ಹಿಂದೆ ಕುಮ್ಕಿ ಆನೆ ಕಾವೇರಿಯೂ ಹೆಜ್ಜೆ ಹಾಕಿತು. ಇದರೊಂದಿಗೆ ಎರಡು ತುಕಡಿಯಲ್ಲಿ ಎಸಿಪಿ ನಾಗರಾಜು ನೇತೃತ್ವದಲ್ಲಿ 30 ಕುದುರೆಗಳು ಪಾಲ್ಗೊಂಡಿದ್ದವು. ಪೊಲೀಸ್ ಬ್ಯಾಂಡ್ ವಾದನದ ತಂಡ ನುಡಿಸಿದ ವಾದನದ ಹಿಮ್ಮೇಳದೊಂದಿಗೆ ದಸರಾ ಆನೆ, ಅಶ್ವರೋಹಿದಳದ ಕುದುರೆಗಳು ಸಾಗಿದವು.
ಜಂಬೂಸವಾರಿ ದಿನ ಗಣ್ಯರು ಅಂಬಾರಿಗೆ ಪುಷ್ಪಾರ್ಚನೆ ಮಾಡುವ ಸ್ಥಳದಲ್ಲಿ ಹಾಕಲಾಗಿದ್ದ ವೇದಿಕೆಯಲ್ಲಿ ಚೆನ್ನಪಟ್ಟಣದ ಪೊಲೀಸ್ ತರಬೇತಿ ಶಾಲೆಯ ಎಸ್‌ಪಿ ಶೈಲೇಂದ್ರ, ಅರಮನೆ ಭದ್ರತಾ ಪಡೆ ಎಸಿಪಿ ಚಂದ್ರಶೇಖರ್, ಪಶುವೈದ್ಯ ಡಾ.ಡಿ.ಎನ್.ನಾಗರಾಜು ಅಂಬಾರಿ ಆನೆ ಅಭಿಮನ್ಯುವಿನ ಮೇಲೆ ಪುಷ್ಪಾರ್ಚನೆ ಮಾಡಿದರು. ಈ ವೇಳೆ ಪೊಲೀಸ್ ಬ್ಯಾಂಡ್ ತಂಡದ ಸದಸ್ಯರು ರಾಷ್ಟ್ರಗೀತೆ ನುಡಿಸಿದರು. ಈ ವೇಳೆ ಗಜಪಡೆಯಿಂದ ಸೊಂಡಿಲೆತ್ತಿಸಿ ಸೆಲ್ಯೂಟ್ ಹೊಡಿಸಲಾಯಿತು. ಈ ಸಂದರ್ಭದಲ್ಲಿ ಅರಮನೆ ಭದ್ರತಾ ಮಂಡಳಿ ಇನ್ಸ್‌ಪೆಕ್ಟರ್‌ಗಳಾದ ಆನಂದ್ ಮತ್ತು ಗಂಗಾಧರ್ ನೇತೃತ್ವದಲ್ಲಿ ಸಮವಸ್ತ್ರದಲ್ಲಿದ್ದ ಪೊಲೀಸರು ಸೆಲ್ಯೂಟ್ ಹೊಡೆದು ಗೌರವ ಸಮರ್ಪಿಸಿದರು. ಇಂದು ನಡೆದ ತಾಲೀಮು ಮೊದಲನೆಯದ್ದಾಗಿದ್ದರಿಂದ ಅಭಿಮನ್ಯುವಿಗೆ ಮರದ ಅಂಬಾರಿಯನ್ನು ಕಟ್ಟದೆ, ಬಾರವನ್ನು ಹೊರಿಸದೇ ಹಾಗೆಯೇ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು.
ಬೆಚ್ಚಿದ ಕುದುರೆ: ತಾಲೀಮಿನ ವೇಳೆ ಅರಮನೆ ಆವರಣದಲ್ಲಿನ ತ್ರಿನೇಶ್ವರ ಸ್ವಾಮಿ ದೇವಾಲಯಕ್ಕೆ ಹೋಗುವ ಮಾರ್ಗದದಲ್ಲಿ ಗಾಬರಿಯಾದ ಕುದುರೆಯೊಂದು ಹಿಂದಕ್ಕೆ ಚಲಿಸಲಾರಂಭಿಸಿತು. ಈ ವೇಳೆ ಮುಂಗಾಲನ್ನು ಮೇಲಕ್ಕೆತ್ತಿ ಮುಂದೆ ಹೋಗಲು ಹಿಂದೇಟು ಹಾಕುತ್ತಿತ್ತು. ಇದನ್ನು ನಿಯಂತ್ರಿಸಲು ಅದರ ಮೇಲೆ ಸವಾರಿ ಮಾಡುತ್ತಿದ್ದ ಮೌಂಟೆಡ್ ಪೊಲೀಸ್ ಪೇದೆ ಹರಸಾಹಸಪಟ್ಟರು.
ಆದರೆ ನಿಯಂತ್ರಣಕ್ಕೆ ಬಾರದ ಆ ಕುದುರೆ ಮೇಲಿದ್ದ ಪೇದೆಯನ್ನು ನೆಲಕ್ಕುರುಳಿಸಿ ವಾಪಸ್ಸು ಓಡಲಾರಂಭಿಸಿತು. ಕೂಡಲೇ ಇತರೆ ಸಿಬ್ಬಂದಿಗಳು ತಮ್ಮ ತಮ್ಮ ಕುದುರೆಗಳೊಂದಿಗೆ ಬಂದು ಗಾಬರಿಗೊಂಡಿದ್ದ ಕುದುರೆಯನ್ನು ಸಮಾದಾನ ಮಾಡಲು ಯಶಸ್ವಿಯಾದರು. ಇದೇ ಕುದುರೆ ಸಿಡಿಮದ್ದು ತಾಲೀಮಿನ ವೇಳೆಯೂ ಗಾಬರಿಯಾಗಿತ್ತು ಎನ್ನಲಾಗಿದೆ.
‘ಹೊಸದಾಗಿ ಭಾಗವಹಿಸುತ್ತಿರುವ ಕುದುರೆ ಬೆದರಿದೆ. ಮೊದಲ ದಿನವಾದರಿಂದ ಸ್ವಲ್ಪ ಬೆಚ್ಚಿದೆ. ಇನ್ನು ಮೂವರು ದಿನ ಇರುವುದರಿಂದ ಅಭ್ಯಾಸವಾಗಲಿದ್ದು, ಯಾವುದೇ ಸಮಸ್ಯೆ ಆಗುವುದಿಲ್ಲ’ ಎಂದು ಕೆಎಆರ್‌ಪಿ ಮೌಂಟೆಡ್ ಕಮಾಂಡೆಂಟ್ ಎಂ.ಜಿ.ನಾಗರಾಜು ಸ್ಪಷ್ಟಪಡಿಸಿದ್ದಾರೆ.