ಅಭಿನವ ಶ್ರೀಗಳ ನೇತೃತ್ವದಲ್ಲಿ ಮೌನ ಮೆರವಣಿಗೆ

CRP-
Published on

ಚನ್ನರಾಯಪಟ್ಟಣ: ಬೆಳಗಾವಿ ಜಿಲ್ಲೆಯ ನಂದಿಪರ್ವತ ಜೈನ ಕ್ಷೇತ್ರದಲ್ಲಿ ಆಚಾರ್ಯ ಮುನಿಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆಯನ್ನು ಖಂಡಿಸಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಸೋಮವಾರ ಶ್ರವಣಬೆಳಗೊಳದಲ್ಲಿ ಶಾಂತಿಯುತವಾಗಿ ಪ್ರತಿಭಟನಾ ಮೆರವಣಿಗೆ ನಡೆಯಿತು.


ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಅಹಿಂಸಾ ಪರಮೋ ಧರ್ಮ ಎಂದು ಬದುಕುತ್ತಿರುವ ಜೈನ ಮುನಿಗಳು ಹಾಗೂ ಸಾಧು ಸಂತರಿಗೆ ರಕ್ಷಣೆ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಮುನಿಗಳು ಯಾವಾಗಲೂ ಕಾಲ್ನಡಿಗೆಯಲ್ಲೇ ವಿಹಾರ ಮಾಡುತ್ತಾರೆ. ವಾಹನ ಬಳಸುವುದಿಲ್ಲ. ನಡೆಯುವಾಗ ಸಣ್ಣ ಕ್ರಿಮಿ, ಕೀಟಗಳಿಗೂ ಹಿಂಸೆ ಆಗಬಾರದು ಎಂದು ಜಾಗ್ರತೆ ವಹಿಸುತ್ತಾರೆ. ಅಂತಹ ಮುನಿಗಳನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಇಡೀ ಜೈನ ಸಮಾಜಕ್ಕೆ ಆಘಾತ ಉಂಟು ಮಾಡಿದೆ. ಅಲ್ಪಸಂಖ್ಯಾತರಾದ ಜೈನ ಸಮುದಾಯಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು. ಈ ಹೇಯ ಕೃತ್ಯ ನಡೆಸಿದ ಹಂತಕರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.


ಅಹಿಂಸೆ ಮತ್ತು ತ್ಯಾಗದ ಪ್ರತಿಪಾದಕರು ಹಾಗೂ ಶಾಂತಿಪ್ರಿಯರು ಆಗಿರುವ ಜೈನ ಮುನಿಗಳ ಮೇಲೆ ಇಂತಹ ಕೃತ್ಯಗಳು ಮುಂದೆ ಮರುಕಳಿಸದಂತೆ ರಕ್ಷಣೆ ನೀಡಬೇಕು. ಜೈನ ಬಸದಿಗಳು, ಮಠಗಳು, ಮುನಿಗಳು, ಸಾಧು-ಸಂತರು, ಮಾತಾಜಿ ಅವರು ವಾಸ್ತವ್ಯವಿರುವ ಆಶ್ರಮ, ಅವರ ವಿಹಾರ ಸಂದರ್ಭದಲ್ಲಿ ಸೂಕ್ತ ಮುನ್ನೆಚ್ಚರಿಕೆ ಮತ್ತು ಭದ್ರತಾ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಜೈನಮುನಿಗಳ ಹತ್ಯೆಯನ್ನು ಖಂಡಿಸಿ ಬಾಹುಬಲಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಸುನೀಲ್‌ಕುಮಾರ್ ಮತ್ತು ಗೊಮ್ಮಟವಾಣಿ ಪತ್ರಿಕೆಯ ಸಂಪಾದಕ ಎಸ್.ಎನ್.ಅಶೋಕ್‌ಕುಮಾರ್ ಮಾತನಾಡಿದರು.


ಮೆರವಣಿಗೆಗೆ ಚಾಲನೆ: ಶ್ರೀಜೈನ ಮಠದಿಂದ ಆರಂಭವಾದ ಮೆರವಣಿಗೆಗೆ ಯುಗಲ ಮುನಿಗಳಾದ ಮುನಿಶ್ರೀ ಅಮೋಘಕೀರ್ತಿ ಮಹಾರಾಜರು ಹಾಗೂ ಮುನಿಶ್ರೀ ಅಮರಕೀರ್ತಿ ಮಹಾರಾಜರು ಚಾಲನೆ ನೀಡಿದರು. ನಂತರ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೌನ ಮೆರವಣಿಗೆ ಮೂಲಕ ನಾಡಕಚೇರಿಗೆ ತೆರಳಿ ಉಪ ತಹಸೀಲ್ದಾರ್ ದೇವರಾಜ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.


ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನುರಾಧಾ ಲೋಹಿತ್, ಸದಸ್ಯ ಎಸ್.ಬಿ.ಯಶಸ್, ಮಾಜಿ ಅಧ್ಯಕ್ಷ ಎಸ್.ಆರ್.ಲೋಕೇಶ್, ರವಿನಂಜಪ್ಪ, ಮಾಜಿ ಸದಸ್ಯ ಎನ್.ಆರ್.ವಾಸು, ಎಚ್.ಪಿ.ಅಶೋಕ್‌ಕುಮಾರ್, ಎಸ್.ಪಿ.ಭಾನುಕುಮಾರ್, ಶ್ರವಣಬೆಳಗೊಳ ದಿಗಂಬರ ಜೈನ ಸಮಾಜ, ಕೂಷ್ಮಾಂಡಿನಿ ಮಹಿಳಾ ಸಮಾಜ, ನೇಮಿನಾಥ ತೀರ್ಥಂಕರ ಯುವಕ ಸಂಘ, ಎಸ್‌ಡಿಜೆಎಂಐಎಂಸಿ ಟ್ರಸ್ಟ್ ಸದಸ್ಯರು, ಕ್ಷೇತ್ರದ ಶಾಸ್ತ್ರಿಗಳು ಹಾಗೂ ಸಾವಿರಾರು ನಾಗರಿಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಹಾಸನ, ಆರಸೀಕೆರೆಯಲ್ಲೂ ಮುನಿಶ್ರೀ ಹತ್ಯೆ ಖಂಡಿಸಿ ಪ್ರತಿಭಟನೆ ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net