

ಹುಬ್ಬಳ್ಳಿ: ಶನಿವಾರ ಸಂಜೆ ರಭಸದ ಗಾಳಿಯೊಂದಿಗೆ ಸುರಿದ ಅಬ್ಬರದ ಮಳೆಗೆ ವಾಣಿಜ್ಯ ನಗರಿ ಹುಬ್ಬಳ್ಳಿ ತತ್ತರಿಸಿತು. ನಗರದ ವಿವಿಧೆಡೆ 100ಕ್ಕೂ ಹೆಚ್ಚು ಮರಗಳು ಮುರಿದು ಬಿದ್ದಿದ್ದು, ಕಾರ್, ಬೈಕ್ಗಳಿಗೆ ಹಾನಿಯಾಗಿವೆ. ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ಗಾಳಿಯ ವೇಗ ಬಲವಾಗಿತ್ತು. ಜತೆಗೆ ಗುಡುಗು-ಮಿಂಚಿನ ಆರ್ಭಟಕ್ಕೆ ನಗರದ ಜನತೆ ಬೆಚ್ಚಿ ಬಿದ್ದರು. ಅರ್ಧ ಗಂಟೆಗೂ ಹೆಚ್ಚು ಕಾಲ ಜೋರಾಗಿ ಮಳೆ ಸುರಿಯಿತು. ರಾತ್ರಿಯವರೆಗೂ ತುಂತುರು ಮಳೆ ಮುಂದುವರಿದಿತ್ತು. ಲಾಕ್ಡೌನ್ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಜನ-ವಾಹನಗಳ ಸಂಚಾರ ವಿರಳವಾಗಿದ್ದರಿಂದ ಜೀವಪಾಯ ಸಂಭವಿಸಿಲ್ಲ.
ಕೇಶ್ವಾಪುರ ಬದಾಮಿನಗರ ಮಧುರಾ ಎಸ್ಟೇಟ್ನಲ್ಲಿ 20ಕ್ಕೂ ಹೆಚ್ಚು ಮರಗಳ ರೆಂಬೆ-ಕೊಂಬೆಗಳು ಮುರಿದು ಬಿದ್ದಿದ್ದು, 3 ಕಾರು, 5 ಬೈಕ್ಗಳಿಗೆ ಹಾನಿಯಾಗಿವೆ. ಭವಾನಿನಗರ 1ನೇ ಕ್ರಾಸ್ನಲ್ಲಿ ವಿದ್ಯುತ್ ಕಂಬ ಮುರಿದು ಬಿದ್ದು ಆತಂಕ ಸೃಷ್ಟಿಸಿತ್ತು. ಆದರ್ಶನಗರ 3ನೇ ಕ್ರಾಸ್, ಶಕ್ತಿ ಕಾಲನಿ ಮುಖ್ಯರಸ್ತೆ 1ನೇ ಕ್ರಾಸ್, ವಿದ್ಯಾನಗರ ಕಿಮ್್ಸ ಎದುರುಗಡೆ ಗಿಡ-ಮರಗಳು ಮುರಿದು ಬಿದ್ದಿವೆ. ಕುಸುಗಲ್ ರಸ್ತೆ ರಿಲಾಯನ್ಸ್ ಫ್ರೆಶ್ ಬಳಿ 3 ಮರಗಳು , ಕೇಶ್ವಾಪುರ ದಿವಾಕರ ಆಸ್ಪತ್ರೆ, ರಮೇಶ ಭವನ, ಸವೋದಯ ವೃತ್ತದಲ್ಲಿ ಮರಗಳು ಬಿದ್ದಿವೆ. ವಿಶ್ವೇಶ್ವರನಗರದಲ್ಲಿ ದೊಡ್ಡ ಮರದ ಕೊಂಬೆಯೊಂದು ಮುರಿದು ಬಿದ್ದ ಪರಿಣಾಮ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು. ಮಳೆ ನಿಂತ ಮೇಲೆ ಸ್ಥಳೀಯ ಯುವಕರು ಮರದ ರೆಂಬೆ-ಕೊಂಬೆಗಳನ್ನು ತೆರವುಗೊಳಿಸಿದರು.
ಗಾಳಿ ಬಲವಾಗಿ ಬೀಸಿದ್ದರಿಂದ ಕೆಲವೆಡೆ ಜಾಹಿರಾತು ಫಲಕಗಳು ಹರಿದು ಹೋಗಿವೆ. ಹೋರ್ಡಿಂಗ್ಗಳು ಮುರಿದು ಬಿದ್ದಿವೆ. ಬೋರ್ಡ್ಗಳು, ತಗಡಿನ ಸೀಟ್ಗಳು ಹಾರಿ ಹೋಗಿವೆ. ವಿದ್ಯುತ್ ಮಾರ್ಗಗಳ ಮೇಲೆ ಮರಗಳ ರೆಂಬೆ-ಕೊಂಬೆಗಳು ಮುರಿದು ಬಿದ್ದ ಪರಿಣಾಮ ಅರ್ಧದಷ್ಟು ನಗರ ಕತ್ತಲೆಯಲ್ಲಿ ಮುಳುಗಿತ್ತು. ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಲ್ಪಿಸಲು ಹೆಣಗಾಡಿದ್ದಾರೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಪಾಲಿಕೆ, ಹೆಸ್ಕಾಂ, ಜಲ ಮಂಡಳಿ ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದೆ. ಇದು ಬಿದ್ದ ಗಿಡ-ಮರ, ವಿದ್ಯುತ್ ಕಂಬಗಳ ತೆರವು ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಭಾನುವಾರ ರಜಾ ದಿನವಾಗಿರುವುದರಿಂದ ಪರಿಸ್ಥಿತಿ ಗಂಭೀರವಾಗಿದೆ.
ವಸಂತ ನಗರದಲ್ಲಿ ಏಳೆಂಟು ಕಡೆ ಮರಗಳು ಬಿದ್ದಿವೆ. ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಪ್ಲಾಟ್ಫಾಮ್ರ್ 4ಮತ್ತು 5ರಲ್ಲಿರುವ ಸೀನಿಯರ್ ಸೆಕ್ಷನ್ ಇಂಜಿನಿಯರ್/ ಕ್ಯಾರೇಜ್ ಆಂಡ್ ವ್ಯಾಗನ್ ಕಚೇರಿಯ ಮೇಲ್ಛಾವಣಿ ತಗಡು ಹಾರಿ ಹೋಗಿದ್ದು, ಗೋಡೆಯ ಮೇಲ್ಭಾಗದ ಇಟ್ಟಿಗೆ ಬಿದ್ದಿವೆ. ಲಾಕ್ಡೌನ್ನಿಂದಾಗಿ ಬೆರಳೆಣಿಕೆಯಷ್ಟು ಸಿಬ್ಬಂದಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ತಗಡುಗಳು ಕೀಳುವ ಶಬ್ಧವಾಗುತ್ತಿದ್ದಂತೆಯೇ ಅಲ್ಲಿದ್ದ ಸಿಬ್ಬಂದಿ ಹೊರಗೆ ಓಡಿ ಹೋಗಿ ಬಚಾವಾದರು. ಕಚೇರಿಯಲ್ಲಿ ಕೆಲ ಕಂಪ್ಯೂಟರ್ಗಳಿಗೆ ಹಾನಿಯಾಗಿದೆ.
ನಗರದಲ್ಲಿ ಶುಕ್ರವಾರವೂ ಗುಡುಗು-ಸಿಡಿಲು, ಗಾಳಿಯೊಂದಿಗೆ ಮಳೆಯಾಗಿತ್ತು. ಆದರೆ, ಅದು ಇಷ್ಟು ರಭಸದಿಂದ ಕೂಡಿರಲಿಲ್ಲ. ಇಂದು ಮಳೆಯ ಆರ್ಭಟ ಭಯ ಹುಟ್ಟಿಸಿತ್ತು.
ಬಿಆರ್ಟಿಎಸ್ ರಸ್ತೆ ತುಂಬ ಚರಂಡಿ ತ್ಯಾಜ್ಯ: ಧಾರವಾಡ ನಗರದಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಯಿಂದಾಗಿ ಇಲ್ಲಿನ ಟೋಲ್ ನಾಕಾ ಪ್ರದೇಶ ಮತ್ತೆ ಜಲಾವೃತವಾಗಿತ್ತು. ಬಿಆರ್ಟಿಎಸ್ ರಸ್ತೆ ತುಂಬೆಲ್ಲ ಚರಂಡಿಯ ತ್ಯಾಜ್ಯ ಆವರಿಸಿಕೊಂಡಿತ್ತು.
ಟೋಲ್ ನಾಕಾ ಪ್ರದೇಶದಲ್ಲಿ ಬಿಆರ್ಟಿಎಸ್ನ ಅವೈಜ್ಞಾನಿಕ ಕಾಮಗಾರಿಯಿಂದ ಕಳೆದ ವರ್ಷವಿಡೀ ರಸ್ತೆ ಜಲಾವೃತವಾಗುತ್ತಿತ್ತು. ಮೇಲ್ಭಾಗದಿಂದ ಬರುವ ನೀರು ಸುಲಭವಾಗಿ ಹರಿದುಹೋಗುವಂತೆ ಚರಂಡಿ ವ್ಯವಸ್ಥೆ ಮಾಡದ ಕಾರಣ ವಾಹನ ಸವಾರರು ಪರದಾಡಬೇಕಾಗಿತ್ತು. ಬಿಆರ್ಟಿಎಸ್ ಹಾಗೂ ಪಾಲಿಕೆಯಿಂದ ಹೊಸ ಯೋಜನೆಯೊಂದನ್ನು ರೂಪಿಸಿ, ಚರಂಡಿ ನೀರು ಹಾಗೂ ತ್ಯಾಜ್ಯ ರಸ್ತೆ ಮೇಲೆ ಹರಿಯದಂತೆ ಮಾಡಲಾಗುವುದು ಎಂಬ ಅಧಿಕಾರಿಗಳ ಭರವಸೆ ಈಡೇರಿಲ್ಲ. ಪರಿಣಾಮ ಶನಿವಾರ ರಸ್ತೆ ತುಂಬ ಚರಂಡಿ ತ್ಯಾಜ್ಯ ತುಂಬಿಕೊಂಡು ದುರ್ವಾಸನೆ ಬೀರಿತು. ಶನಿವಾರ ಬೆಳಗ್ಗೆ ಪಾಲಿಕೆಯ ಪೌರ ಕಾರ್ವಿುಕರು ವಾಹನಗಳಲ್ಲಿ ತ್ಯಾಜ್ಯವನ್ನು ತುಂಬಿ ಸಾಗಿಸಿ ರಸ್ತೆಯನ್ನು ಸ್ವಚ್ಛಗೊಳಿಸಿದರು. ಶನಿವಾರ ಸಂಜೆ ನಗರದಲ್ಲಿ ಮತ್ತೆ ಮಳೆ ಸುರಿಯಿತು. ಮಳೆಗೂ ಮೊದಲು ಆಲಿಕಲ್ಲು ಸುರಿದವು. ಮನೆಯಲ್ಲಿದ್ದ ಜನ ರಸ್ತೆಗಿಳಿದು ಆಲಿಕಲ್ಲುಗಳನ್ನು ಆರಿಸಿಕೊಂಡರು.
ಮಳೆಗೆ ಉದುರಿದ ಮಾವಿನಕಾಯಿ: ಧಾರವಾಡ ತಾಲೂಕಿನ ವಿವಿಧೆಡೆ ಶುಕ್ರವಾರ ಮತ್ತು ಶನಿವಾರ ಸಂಜೆ ಭಾರಿ ಗಾಳಿ ಹಾಗೂ ಧಾರಾಕಾರ ಮಳೆಗೆ ಮಾವಿನಕಾಯಿ ಫಸಲು ಉರುಳಿದೆ. ತಾಲೂಕಿನ ಕ್ಯಾರಕೊಪ್ಪ, ನರೇಂದ್ರ, ದೇವರಹುಬ್ಬಳ್ಳಿ, ನಿಗದಿ, ದೇವಗಿರಿ, ಬೆಳ್ಳಿಗಟ್ಟಿ ಸೇರಿ ವಿವಿಧೆಡೆ ಮಾವಿನಕಾಯಿ ಧರೆಗುರುಳಿವೆ. ಮೊದಲೇ ಸಂಕಷ್ಟದಲ್ಲಿರುವ ರೈತರಿಗೆ ಅಕಾಲಿಕ ಮಳೆ ಮತ್ತೊಂದು ಆಘಾತ ನೀಡಿದಂತಾಗಿದೆ. ರೈತರು ಒಡೆದ ಮಾವಿನಕಾಯಿಗಳನ್ನು ಆರಿಸುವ ವೇಳೆ ಮಮ್ಮಲ ಮರುಗಿದರು.
ವೃದ್ಧೆ ಸಾವು: ಮನೆ ಮೇಲೆ ಬಿದ್ದಿದ್ದ ತೆಂಗಿನಗರಿ ತೆಗೆಯಲು ಹೋಗಿದ್ದ ವೃದ್ಧೆ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಧಾರವಾಡದ ಸಪ್ತಾಪುರದಲ್ಲಿ ಶನಿವಾರ ನಡೆದಿದೆ. ಸರೋಜಾ ಸಾಟೆ (65) ಮೃತಪಟ್ಟ ಮಹಿಳೆ. ಶುಕ್ರವಾರ ರಾತ್ರಿ ಗಾಳಿ ಸಹಿತ ಸುರಿದ ಮಳೆಗೆ ಮನೆ ಮೇಲೆ ತೆಂಗಿನ ಗರಿಗಳು ಬಿದ್ದಿದ್ದವು. ಶನಿವಾರ ಬೆಳಗ್ಗೆ ಅವುಗಳನ್ನು ತೆರವುಗೊಳಿಸಲು ಮುಂದಾದಾಗ ಆಯತಪ್ಪಿ ಕೆಳಗೆ ಬಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.