

ಚಿಕ್ಕಬಳ್ಳಾಪುರ: ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಳವಾಗುತ್ತಿರುವುದರ ನಡುವೆ ಬೇಗೆ ಮತ್ತು ಬಾಯಾರಿಕೆಗೆ ವ್ಯಾಪಕವಾಗಿ ಜನರು ಹೈರಾಣರಾಗುತ್ತಿದ್ದಾರೆ. ಎಲ್ಲೆಡೆ ಅಬ್ಬಬ್ಬಾ, ಏನು ಬಿಸಿಲು ಎಂಬ ಉದ್ಗಾರವೇ ಕೇಳಿ ಬರುತ್ತಿದೆ. ಬೆಳಗ್ಗೆ 8ರಿಂದಲೇ ಸೂರ್ಯನ ಕಿರಣಗಳು ಚುಚ್ಚಲಾರಂಭಿಸುತ್ತಿವೆ. ಮಧ್ಯಾಹ್ನದ ವೇಳೆ ರಸ್ತೆಗಳಲ್ಲಿ ಓಡಾಡಲು ಆಗುತ್ತಿಲ್ಲ. ಮನೆ, ಕಚೇರಿ, ಅಂಗಡಿ ಮತ್ತು ಹೋಟೆಲ್‌ಗಳಲ್ಲಿ ಕೂರಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಜನರು ಗಂಟೆಗಟ್ಟಲೇ ಗಿಡಮರಗಳ ನೆರಳಿನಲ್ಲಿ, ಅಶ್ವತ್ಥಕಟ್ಟೆಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಯುವಕರು ಸೆಖೆಯ ಪರಿಹಾರಕ್ಕೆ ಬಾವಿ, ತೊಟ್ಟಿಗಳಲ್ಲಿ ಈಜಾಡುತ್ತಿದ್ದಾರೆ.
ಬೇಸಿಗೆಯ ಪ್ರಾರಂಭದಲ್ಲಿ 28 ಡಿಗ್ರಿ ಸೆಲ್ಸಿಯಸ್ ಇತ್ತು. ಇದೀಗ ಬರೋಬ್ಬರಿ 35 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮುಂಬರುವ ದಿನಗಳಲ್ಲಿ ಸುಡು ಬಿಸಿಲಿನ ಬೇಗೆ ತೀವ್ರವಾಗಿ ಕಾಡುವ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ಶ್ರೀರಾಮನವಮಿಯ ಸಂದರ್ಭದಲ್ಲಿ ತುಂತುರು ಮಳೆ ಬಿದ್ದ ಹಿನ್ನೆಲೆಯಲ್ಲಿ ಅಲ್ಪಸ್ವಲ್ಪ ತಂಪು ವಾತಾವರಣ ಕಂಡು ಬಂದರೂ ಸೆಖೆಯ ಬಾಧೆ ಮಾತ್ರ ಹಾಗೆಯೇ ಇತ್ತು.
ದುಬಾರಿ ವಿದ್ಯುತ್ ಬಳಕೆ: ಸಾಮಾನ್ಯವಾಗಿ ಬೇಸಿಗೆ ಹಿನ್ನೆಲೆಯಲ್ಲಿ ಸೆಖೆಗೆ ವಿದ್ಯುತ್ ಬಳಕೆಯೂ ಹೆಚ್ಚಾಗಿರುತ್ತದೆ. ಇದನ್ನು ನಿಯಂತ್ರಿಸಲು ಅನಿಶ್ಚಿತ ಲೋಡ್ ಶೆಡ್ಡಿಂಗ್ ಜಾರಿಯಲ್ಲಿರುತ್ತದೆ. ಇದೇ ಮಾದರಿಯಲ್ಲಿ ಈ ಬಾರಿಯೂ ಹೆಚ್ಚು ವಿದ್ಯುತ್ ಬಳಕೆ ಕಂಡು ಬರುತ್ತಿದೆ. ಸೆಖೆಗೆ ನಿದ್ದೆ ಬರುವುದಿಲ್ಲ. ಹವಾ ನಿಯಂತ್ರಣ ಯಂತ್ರ, ಫ್ಯಾನ್, ಯುಪಿಎಸ್‌ಗಳಿಗೆ ನಿರಂತರ ಕೆಲಸ. ಇದರಿಂದ ಸರಾಸರಿ ಎಲ್ಲ ಕಡೆ ಶೇ.30 ವಿದ್ಯುತ್ ಬಿಲ್ ಹೆಚ್ಚಾಗುತ್ತಿದೆ. ಇನ್ನು ಓವರ್ ಲೋಡ್ ಒತ್ತಡ, ವಿದ್ಯುತ್ ಸಂಪರ್ಕ ಕಡಿತದ ದೂರುಗಳು ಕೇಳಿ ಬರುತ್ತಿವೆ.
ತಂಪು ಆಹಾರ ಸೇವನೆಗೆ ಒತ್ತು: ಮಳೆಗಾಲ, ಚಳಿಗಾಲದಲ್ಲಿ ಬಿಸಿಬಿಸಿ ಆಹಾರ ಪದಾರ್ಥಗಳ ಸೇವನೆಗೆ ಹೆಚ್ಚು ಒಲವು. ಹಾಗೆಯೇ ಬೇಸಿಗೆಯಲ್ಲಿ ತಂಪು ಪಾನಿಯ ಮತ್ತು ಆಹಾರಕ್ಕೆ ಒತ್ತು ಕೊಡಲಾಗುತ್ತಿದೆ. ಬಾಯಾರಿಕೆ ನೀಗಿಸಿಕೊಳ್ಳುವ ಸಲುವಾಗಿ ಜನರು ಕಲ್ಲಂಗಡಿ, ಕರಬೂಜ, ಕಬ್ಬಿನಹಾಲು, ಎಳನೀರು, ಐಸ್ ಕ್ರೀಮ್, ತಂಪು ಪಾನಿಯಗಳ ಮೊರೆ ಹೋಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದ ಎಂ.ಜಿ.ರಸ್ತೆ, ಬಿ.ಬಿ.ರಸ್ತೆ, ಬಜಾರ್ ರಸ್ತೆಗಳಲ್ಲಿ ಜ್ಯೂಸ್, ಕಲ್ಲಂಗಡಿ ಹಣ್ಣಿನ ಅಂಗಡಿಗಳು ತಲೆ ಎತ್ತಿವೆ. ಮಧ್ಯಾಹ್ನಕ್ಕೆಲ್ಲ ಪೂರ್ತಿಯಾಗಿ ಎಳನೀರು ಮಾರಾಟವಾಗುತ್ತಿವೆ. ಇನ್ನೂ ಹಿಂದೆ ಬಹುತೇಕ ಖಾಲಿಯಾಗಿ ಇರುತ್ತಿದ್ದ ತಂಪು ಪಾನಿಯ, ಐಸ್ ಕ್ರೀಮ್ ಅಂಗಡಿಗಳಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದ್ದಾರೆ.
ಬೇಸಿಗೆಯಲ್ಲಿ ಎಚ್ಚರವಹಿಸಿ: ಬಿಸಿಲಿನ ಹಿನ್ನೆಲೆಯಲ್ಲಿ ಅನಾರೋಗ್ಯ ಸಮಸ್ಯೆಗಳು ಕಂಡು ಬರುತ್ತಿವೆ. ಬಿಸಿಲಿನ ತೀವ್ರತೆಗೆ ತುರಿಕೆ, ತಲೆನೋವು, ತಲೆ ಸುತ್ತುವಿಕೆ, ಮೈ ಮೇಲೆ ಸಣ್ಣ ಗುಳ್ಳೆಗಳು, ನಿತ್ರಾಣ, ರಕ್ತದೊತ್ತಡ ಸೇರಿ ಹಲವು ಸಮಸ್ಯೆಗಳು ಕಂಡು ಬರುತ್ತಿವೆ. ಇದಕ್ಕೆ ಹೆಚ್ಚಿನ ನೀರು, ತಂಪು ಪಾನಿಯ ಸೇವನೆ, ಬೆಳಗ್ಗೆ ಮತ್ತು ರಾತ್ರಿ ಸ್ನಾನ, ಹೆಚ್ಚಿಗೆ ಬಿಸಿಲಿನಲ್ಲಿ ಓಡಾಡದಿರುವಿಕೆ, ತೆಳುವಾದ ಬಟ್ಟೆ ಧರಿಸಲು ವೈದ್ಯರು ಸಲಹೆ ನೀಡುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸೆಖೆಗೆ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಮಧ್ಯಾಹ್ನದ ಬಿಸಿಲಿನಲ್ಲಂತೂ ಓಡಾಡುತ್ತಿಲ್ಲ. ಮನೆಯಲ್ಲಿ ಇಡೀ ದಿನ ಫ್ಯಾನ್ ಬಳಕೆ ಸಾಮಾನ್ಯವಾಗಿದೆ. ಅರುಣ ಕುಮಾರ್, ಸ್ಥಳೀಯ ನಿವಾಸಿ, ಚಿಕ್ಕಬಳ್ಳಾಪುರ