

ಬೀದರ್: ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಪೂಜನೀಯ ಸ್ಥಾನವಿದೆ. ಇತ್ತೀಚೆಗಂತೂ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ತಮ್ಮ ಛಾಪು ಮೂಡಿಸಿಕೊಳ್ಳುತ್ತಿದ್ದಾರೆ. ಆಕೆ ಎಷ್ಟೇ ಸಂಘರ್ಷ ನಡೆಸಿದರೂ ಇನ್ನೂ ಅಬಲೆ ಎನಿಸಿಕೊಳ್ಳುತ್ತಿರುವುದು ವಿಷಾದಕರ ಸಂಗತಿ ಎಂದು ಜ್ಞಾನಾಸುಧಾ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಡಾ. ಜಿ. ಪೂರ್ಣಿಮಾ ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿನ ವಾಲಿ ಶ್ರೀ ಆಸ್ಪತ್ರೆಯಲ್ಲಿ ಸೋಮವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತವು ಅಸುರಕ್ಷತೆ ದೃಷ್ಟಿಯಿಂದ ಜಗತ್ತಿನಲ್ಲಿ 4ನೇ ಸ್ಥಾನದಲ್ಲಿರುವುದು ಕಳವಳಕಾರಿ ವಿಷಯ. ಗಂಡು ಹಾಗೂ ಹೆಣ್ಣು ಸಮಾಜ ಅಭಿವೃದ್ಧಿಯಲ್ಲಿ ಸಮಾನ ಹಕ್ಕುದಾರರು. ಆದರೂ ಮಹಿಳೆಯರ ಶ್ರಮಕ್ಕೆ ಆದ್ಯತೆ, ಗೌರವ ಸಿಗುತ್ತಿಲ್ಲ. ಪುರುಷರಷ್ಟೇ ಮಹಿಳೆಯರಿಗೂ ಗೌರವ ಸಿಗಬೇಕು ಎಂದರು.
ಸಮಾಜದ ಸಮಗ್ರ ವಿಕಾಸದಲ್ಲಿ ಮಹಿಳೆಯರ ಪಾತ್ರ ಹಿರಿದಾಗಿದೆ. ತಾಯಿಯು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದಾಗ ಸಮಾಜ ಸಬಲವಾಗುತ್ತದೆ. ಮಹಿಳೆ ಸುರಕ್ಷಿತ ಬಾಳಬೇಕಾದರೆ ಕಡ್ಡಾಯವಾಗಿ ಶಿಕ್ಷಣ ಕೊಡಬೇಕು. ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೀಸಲು ಸೌಲಭ್ಯ ಕಲ್ಪಿಸುವ ಅಗತ್ಯವಿದೆ ಎಂದು ಹೇಳಿದರು.
ಅಂಜನಾ ರಜನೀಶ್ ವಾಲಿ ಉದ್ಘಾಟಿಸಿದರು. ಹಿರಿಯ ವೈದ್ಯ ಡಾ. ಮದನಾ ವೈಜಿನಾಥ ಅಧ್ಯಕ್ಷತೆ ವಹಿಸಿದರು. ಈಎನ್ಟಿ ತಜ್ಞ ಡಾ. ವಿ.ವಿ.ನಾಗರಾಜ, ಲಕ್ಷ್ಮೀ ಮೂಲಗಿ ಇದ್ದರು. ಪ್ರತಿಮಾ ಅಮಾಜಿ ನಿರೂಪಣೆ ಮಾಡಿದರು. ಮಹಿಳಾ ದಿನಾಚರಣೆ ನಿಮಿತ್ತ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು.