

ಹೂವಿನಹಡಗಲಿ: ಪಟ್ಟಣದ ಅಬಕಾರಿ ಕಚೇರಿಗೆ ಸಿಬ್ಬಂದಿ ಕೊರತೆ ಜತೆಗೆ ಮೂಲ ಸೌಲಭ್ಯ ಸಮಸ್ಯೆ ಕಾಡುತ್ತಿದೆ. ಇದರಿಂದಾಗಿ ತಾಲೂಕಿನಲ್ಲಿ ಮದ್ಯದ ಅಕ್ರಮ ಚಟುವಟಿಕೆಗಳು ನಿರಾತಂಕವಾಗಿ ನಡೆಯುವಂತಾಗಿದೆ.
ಸರ್ಕಾರ ಒಟ್ಟು 13 ಸಿಬ್ಬಂದಿ ಮಂಜೂರು ಮಾಡಿದ್ದು, ಎಂಟು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ ಇಬ್ಬರು ನಿಯೋಜನೆ ಮೇಲೆ ಬೇರೆಡೆ ತೆರಳಿದ್ದಾರೆ. ಅಬಕಾರಿ ಕಚೇರಿ ತಹಸಿಲ್ ಕಚೇರಿಯ ಮೂರನೆಯ ಮಹಡಿಯಲ್ಲಿದ್ದು, ಸೌಲಭ್ಯಗಳ ಕೊರತೆ ಇದೆ. ಸಿಬ್ಬಂದಿ ಶೌಚಗೃಹವಿಲ್ಲ ಹಾಗೂ ಕಚೇರಿ ಸ್ವಚ್ಛಗೊಳಿಸುವ ಡಿ ಗ್ರೂಪ್ ನೌಕರರಿಲ್ಲ. ಅಧಿಕಾರಿಗಳೇ ಕಚೇರಿಯನ್ನು ನಿತ್ಯ ಸ್ವಚ್ಛಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಕಚೇರಿಯಲ್ಲಿ ನಿರೀಕ್ಷಕ, ಇಬ್ಬರು ಇಎಸ್‌ಐ (ಅಬಕಾರಿ ಉಪನಿರೀಕ್ಷಕರು), ಒಬ್ಬ ದ್ವಿತೀಯ ದರ್ಜೆ ಸಹಾಯಕ ಇದ್ದು, ಐದು ಅಬಕಾರಿ ಪೇದೆಗಳ ಪೈಕಿ ಮೂರು ಜನರಿದ್ದಾರೆ. ಇಬ್ಬರು ಪೇದೆಗಳು ನಿಯೋಜನೆಯ ಮೇಲೆ ಬೇರೆಡೆ ಕಾರ್ಯನಿರ್ವಹಿಸುತ್ತಿದ್ದಾರೆ. ಪೇದೆಗಳ ಎರಡು ಹುದ್ದೆ, ಒಂದು ಚಾಲಕ ಹುದ್ದೆ ಹಾಗೂ ಇತರ ಹುದ್ದೆಗಳು ಖಾಲಿ ಇವೆ. ಅಬಕಾರಿ ಇಲಾಖೆಯಿಂದ ಹೆಚ್ಚಿನ ಆದಾಯ ಪಡೆಯುವ ಸರ್ಕಾರ ಖಾಲಿ ಹುದ್ದೆಗಳ ಭರ್ತಿ, ಮೂಲ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಬೇಕಿದೆ.