

ಧಾರವಾಡ: ಜಿಲ್ಲೆಯಲ್ಲಿ ಅಬಕಾರಿ ಅಕ್ರಮ ಹಾಗೂ ಕಳ್ಳಬಟ್ಟಿ ಸಾರಾಯಿ ಕೇಂದ್ರಗಳನ್ನು ಸಂಪೂರ್ಣ ನಿಮೂಲನೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅಬಕಾರಿ ಹಾಗೂ ಕಳ್ಳಬಟ್ಟಿ ಕಾರ್ಯ ತೊರೆದವರಿಗೆ ಶಿಕ್ಷಣ, ಉದ್ಯೋಗ ನೀಡಿ ಪುನರ್ವಸತಿಗೆ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡ ಅಬಕಾರಿ ಅಕ್ರಮ ಮತ್ತು ಕಳ್ಳಬಟ್ಟಿ ಸಾರಾಯಿ ಕೇಂದ್ರಗಳ ನಿಮೂಲನೆಗೆ ರಚಿತ ಜಿಲ್ಲಾ ಮಟ್ಟದ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 2007- 08ರಿಂದ ವಿವಿಧ ತಾಲೂಕುಗಳಲ್ಲಿ ಸುಮಾರು 29 ಕಳ್ಳಬಟ್ಟಿ ಸಾರಾಯಿ ಕೇಂದ್ರಗಳಿದ್ದವು. ಅಬಕಾರಿ, ಪೊಲೀಸ್ ಹಾಗೂ ಕಂದಾಯ ಇಲಾಖೆಗಳ ನಿರಂತರ ದಾಳಿ ಹಾಗೂ ಗಸ್ತು, ಪರಿಶೀಲನೆಗಳಿಂದ 27ಕ್ಕೂ ಹೆಚ್ಚು ಕಳ್ಳಬಟ್ಟಿ ಕೇಂದ್ರಗಳು ಸಂಪೂರ್ಣ ನಿಮೂಲನೆಯಾಗಿವೆ. ಅಣ್ಣಿಗೇರಿ ಮತ್ತು ತಡಸಿನಕೊಪ್ಪದಲ್ಲಿ ಮಾತ್ರ ಕಳ್ಳಬಟ್ಟಿ ಕೇಂದ್ರಗಳು ಕಂಡುಬರುತ್ತಿದ್ದು, ಅಧಿಕಾರಿಗಳು ನಿರಂತರ ದಾಳಿ ಮಾಡಿ ನಿಯಂತ್ರಿಸಿದ್ದಾರೆ ಎಂದರು.
ಅಬಕಾರಿ ಅಕ್ರಮ ಹಾಗೂ ಕಳ್ಳಬಟ್ಟಿ ಕೇಂದ್ರಗಳಿರುವ ಪ್ರದೇಶದಲ್ಲಿನ ಕುಟುಂಬ ವಿವರಗಳನ್ನು ಸಂಗ್ರಹಿಸಿ, ಅವರ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ವಿವಿಧ ನಿಗಮ, ಮಂಡಳಿಗಳಲ್ಲಿ ಉದ್ಯೋಗ ಹಾಗೂ ವಿವಿಧ ಸ್ವಯಂ ಉದ್ಯೋಗ ಯೋಜನೆಗಳಡಿ ಆರ್ಥಿಕ ನೆರವು ನೀಡಿ ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಮಹಾನಗರ ಪೊಲೀಸ್ ಆಯುಕ್ತ ಆರ್. ದಿಲೀಪ್ ಮಾತನಾಡಿ, ಅಬಕಾರಿ ಅಕ್ರಮ ಹಾಗೂ ಕಳ್ಳಬಟ್ಟಿ ವಿರುದ್ಧ ನಿರತರ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಪೊಲೀಸ್ ಇಲಾಖೆ ಸೂಕ್ತ ಸಹಕಾರ ನೀಡಿ, ಅಕ್ರಮಗಳನ್ನು ನಿಯಂತ್ರಿಸಲಾಗುವುದು ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶವಂತ ಕ್ಷೀರಸಾಗರ, ಉಪ ಪೊಲೀಸ್ ಆಯುಕ್ತರಾದ ಜಿ. ಕೃಷ್ಣಕಾಂತ, ಆರ್.ಬಿ. ಬಸರಗಿ, ಉಪ ವಿಭಾಗಾಧಿಕಾರಿ ಡಾ. ಗೋಪಾಲಕೃಷ್ಣ, ಡಿವೈಎಸ್ಪಿ ರಾಮನಗೌಡ ಹಟ್ಟಿ, ಅಬಕಾರಿ ಅಧೀಕ್ಷಕ ಮಂಜುನಾಥ, ಉಪ ಅಧೀಕ್ಷಕ ಆತ್ಮಲಿಂಗ ಮಠಪತಿ, ತಹಸೀಲ್ದಾರರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಅಬಕಾರಿ ಅಧೀಕ್ಷಕಿ ದೀಪಾಲಿ ಸ್ವಾಗತಿಸಿದರು.
6 ಜನರ ಬಂಧನ
ಅಬಕಾರಿ ಇಲಾಖೆ ಜಿಲ್ಲಾ ಅಧಿಕಾರಿ ಶಿವನಗೌಡ ಪಾಟೀಲ ಮಾತನಾಡಿ, 2018- 19ರಿಂದ 2020- 21ರ ಆಗಸ್ಟ್ವರೆಗೆ ಕಳ್ಳಬಟ್ಟಿ ನಿಮೂಲನೆಗಾಗಿ 205 ಘೊರ ಪ್ರಕರಣಗಳು, 14 ಕಳ್ಳಬಟ್ಟಿ ಸಂಬಂಧಿತ ಪ್ರಕರಣ ದಾಖಲಿಸಲಾಗಿದೆ. 41.200 ಲೀ. ಕಳ್ಳಬಟ್ಟಿ, 2,712 ಲೀ. ಬೆಲ್ಲದ ಕೊಳೆ ಹಾಗೂ 5 ಕೆಜಿ ಬೆಲ್ಲ ವಶಪಡಿಸಿಕೊಂಡು ನಾಶಪಡಿಸಲಾಗಿದೆ. 6 ಜನರನ್ನು ಬಂಧಿಸಿ 1 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದರು.