

ಹನೂರು: ತಾಲೂಕಿನ ಅಜ್ಜೀಪುರ ಸಮೀಪದ ಅಂಬಿಕಾಪುರ ಹಾಗೂ ಗುಂಡಾಪುರ ಭಾಗದಲ್ಲಿ ಕಳೆದ ಮೂರ‌್ನಾಲ್ಕು ತಿಂಗಳಿನಿಂದ ಚಿರತೆಯೊಂದು ಹಲವು ಮೇಕೆಗಳನ್ನು ಬಲಿ ಪಡೆದಿದ್ದು, ಸೋಮವಾರ ರಾತ್ರಿಯೂ ದಾಳಿಯನ್ನು ಮುಂದುವರಿಸಿ ಬಸಪ್ಪನದೊಡ್ಡಿ ಗ್ರಾಮದಲ್ಲಿ ಮೇಕೆಯೊಂದನ್ನು ಕೊಂದು ಅರ್ಧಂಬರ್ಧ ತಿಂದು ಆತಂಕ ಸೃಷ್ಟಿಸಿದೆ.
ಈ ಭಾಗದಲ್ಲಿ ಕಳೆದ ಮಾರ‌್ನಾಲ್ಕು ತಿಂಗಳಿನಿಂದಲೂ ಚಿರತೆ ಹಾವಳಿ ಹೆಚ್ಚಾಗಿದ್ದು, ಜಮೀನು ಹಾಗೂ ಕೊಟ್ಟಿಗೆಗಳ ಮೇಲೆ ದಾಳಿ ನಡೆಸಿ ಮೇಕೆಗಳನ್ನು ಬಲಿ ಪಡೆಯುತ್ತಿದೆ. ಗಂಗನದೊಡ್ಡಿ ಗ್ರಾಮದ ಗೋವಿಂದ ಅವರ 2 ಮೇಕೆ, ಗುಂಡಾಪುರದ ಪರಮೇಶ್ ಅವರ 2, ಅಂಬಿಕಾಪುರದ ಶ್ರೀರಂಗ ಅವರ 4 ಹಾಗೂ ಜಿ.ಆರ್. ನಗರದ ಕುಮಾರ್ ಅವರ 2 ಮೇಕೆಯನ್ನು ಬಲಿ ಪಡೆದಿದೆ. ಅಲ್ಲದೇ, ರಾತ್ರಿ ಬಸಪ್ಪನದೊಡ್ಡಿಯ ಶೇಖ್ ಅನ್ಸರ್ ಅವರ ಜಮೀನಿಗೆ ಲಗ್ಗೆ ಇಟ್ಟ ಚಿರತೆ ಮೇಕೆಯೊಂದನ್ನು ಕೊಂದು ಅರ್ಧಂಬರ್ಧ ತಿಂದು ತೆರಳಿದೆ. ಇದರಿಂದ ಈ ಭಾಗದ ಜನರು ತುಂಬಾ ಭಯಭೀತರಾಗಿದ್ದಾರೆ.
ಚಿರತೆ ಸೆರೆಗೆ ಬೋನು ಅಳವಡಿಕೆ: ಗ್ರಾಮಸ್ಥರು ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮ ವಹಿಸಿರಲಿಲ್ಲ. ಮಂಗಳವಾರ ಬೆಳಗ್ಗೆ ಬಸಪ್ಪನ ದೊಡ್ಡಿ ಗ್ರಾಮದಲ್ಲಿ ಮೇಕೆ ಬಲಿ ಪಡೆದ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡು ಚಿರತೆ ಸೆರೆ ಹಿಡಿಯುವಂತೆ ಒತ್ತಾಯಿಸಿದರು. ಬಳಿಕ ಬಸಪ್ಪನ ದೊಡ್ಡಿ ಗ್ರಾಮದ ಜಮೀನೊಂದರಲ್ಲಿ ಚಿರತೆ ಸೆರೆಗೆ ಬೋನು ಇರಿಸಿ ಸಿಬ್ಬಂದಿ ನಿಯೋಜಿಸಲಾಗಿದೆ.
ರೈತ ಸಂಘದ ತಾಲೂಕು ಅಧ್ಯಕ್ಷ ಅಮ್ಜಾದ್‌ಖಾನ್, ಡಿಆರ್‌ಎಫ್‌ಒ ವಿನಾಯಕ್, ಸಿಬ್ಬಂದಿ, ಗ್ರಾಮಸ್ಥರು ಇದ್ದರು.