

ಅಫಜಲಪುರ: ನಮ್ಮಲ್ಲಿರುವ ಜಾತೀಯತೆಯಿಂದಲೇ ಇಂದು ಹಿಂದುಗಳು ಅಲ್ಪಸಂಖ್ಯಾತರಾಗುತ್ತಿದ್ದಾರೆ. ನಾವೆಲ್ಲ ಹಿಂದುಗಳೆಂಬ ಭಾವನ ನಮ್ಮಲ್ಲಿ ಮೂಡಬೇಕು. ಪ್ರತಿ ಮನೆಯ ಮನಸ್ಸುಗಳು ಒಗ್ಗೂಡಿ ಅಖಂಡ ಭಾರತ ಕಟ್ಟುವ ಸಂಕಲ್ಪ ಮಾಡಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಕಾರ್ಯಕಾರಿ ಸದಸ್ಯ ಶ್ರೀನಿವಾಸ್ ಜೀ ಅಭಿಪ್ರಾಯಪಟ್ಟರು.
ಸರಸಂಬಾ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಶನಿವಾರ ಆಯೋಜಿಸಿದ್ದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದುತ್ವವನ್ನು ಮರೆತು ಜಾತೀಯತೆ ಬೆನ್ನು ಬಿದ್ದಿದ್ದರಿಂದ ದೇಶದಲ್ಲಿ ಹಿಂದುತ್ವ ಮರೆಯಾಗುತ್ತಿದೆ. ಸಮಾಜದಲ್ಲಿ ಹಿಂದುತ್ವದ ಬಗ್ಗೆ ಸಾಮರಸ್ಯ ಭಾವನೆ ಮೂಡಿಸಲು ರಕ್ಷಾಬಂಧನ ಆಯೋಜಿಸಿದ್ದು, ಇದು ದೇಶದ ಪ್ರತಿ ಹಳ್ಳಿಗೂ ತಲುಪಬೇಕು ಎಂದರು.
ಪಾಲಕರು ಮಕ್ಕಳಿಗೆ ಸರಳ ಜೀವನ, ಉನ್ನತ ಆಲೋಚನೆಗಳನ್ನು ಹೇಳಿಕೊಡಬೇಕು. ಸಂಪಾದನೆಗಿಂದ ತಂದೆ- ತಾಯಿ ಮುಖ್ಯ ಎಂಬ ಭಾವ ಮೂಡಬೇಕು. ಮೊಬೈಲ್‌ನಿಂದಾಗಿ ಸಂಸ್ಕಾರ ಕಣ್ಮರೆಯಾಗಿದೆ. ಹೀಗಾಗಿ ಮಕ್ಕಳಿಗೆ ಶ್ಲೋಕ, ಪುರಾಣ ಕಥೆಗಳನ್ನು ಬೋಧಿಸಬೇಕು. ಭಜನೆ, ಸತ್ಸಂಗ ಜತೆಗೆ ರಾಷ್ಟç ನಾಯಕರ ಜೀವನ ಚರಿತ್ರೆ ಓದುವುದನ್ನು ಪ್ರತಿಯೊಬ್ಬರೂ ರೂಢಿ ಮಾಡಿಕೊಳ್ಳಿ ಎಂದು ಕರೆ ನೀಡಿದರು.
ಪ್ರಮುಖರಾದ ಸಂತೋಷ ದಾಮಾ, ಮಲ್ಲಿಕಾರ್ಜುನ ಹಿರೇಮಠ, ಮಲ್ಲಿಕಾರ್ಜುನ ನಿಂಗದಳ್ಳಿ, ಅಶೋಕ ಬಗಲಿ, ದತ್ತು ಬೋಳಶೆಟ್ಟಿ, ಸಿದ್ದು ಖೇಡ, ಶರಣು ಪದಕಿ, ಪ್ರಭಾವತಿ ಮೇತ್ರಿ, ಚಂದ್ರಶೇಖರ ಬಡದಾಳ, ಶರಣು ಕಲಶೆಟ್ಟಿ, ಶಿವರಾಜ ಗಂಗನಳ್ಳಿ, ಸಂಗಮೇಶ ಹರಳಯ್ಯ, ಮಹೇಶ ಕಾಮಶೆಟ್ಟಿ ಇತರರಿದ್ದರು.