ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಹೆಚ್ಚಳ ಆಘಾತಕಾರಿ

5ark-3
ಅರಕಲಗೂಡು ಬಿಜಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ ಕುರಿತ ಅರಿವು ಕಾರ್ಯಕ್ರಮವನ್ನು ಹಿರಿಯ ಶ್ರೇಣಿ ನ್ಯಾಯಾಧೀಶ ಬಿ.ಕೆ. ನಾಗೇಶ್ ಮೂರ್ತಿ ಉದ್ಘಾಟಿಸಿದರು. ಮಹೇಶ್ ಹೊಡೆನೂರು, ಚೇತನಾ, ರಾಜೇಶ್ ಇತರರಿದ್ದರು.
Published on

ಅರಕಲಗೂಡು: ಸಮಾಜದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ ಎಂದು ಜೆಎಂಎಫ್‌ಸಿ ಹಿರಿಯ ಶ್ರೇಣಿ ನ್ಯಾಯಾಧೀಶ ಬಿ.ಕೆ.ನಾಗೇಶ್‌ಮೂರ್ತಿ ಕಳವಳ ವ್ಯಕ್ತಪಡಿಸಿದರು.


ಪಟ್ಟಣದ ಬಿಜಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ ಕುರಿತ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಅಪ್ರಾಪ್ತೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟುವ ಸಲುವಾಗಿ ಪೋಕ್ಸೋ ಕಾಯ್ದೆ ರೂಪಿಸಿದ್ದು ಅಪರಾಧ ಎಸಗುವವರಿಗೆ ಕಾನೂನಿನಲ್ಲಿ ಕಠಿಣವಾದ ಶಿಕ್ಷೆ ಇದೆ. ಈ ಕಾಯ್ದೆ ಕುರಿತು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ದೌರ್ಜನ್ಯ ಪ್ರಕರಣಗಳು ನಡೆದಾಗ ಪೊಲೀಸರು ತುರ್ತು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.


ಹೆಚ್ಚುವರಿ ನ್ಯಾಯಾಧೀಶೆ ಚೇತನಾ ಮಾತನಾಡಿ, ಮನೆಯಿಂದ ಹೊರಹೋದ ಮಕ್ಕಳು ಕ್ಷೇಮವಾಗಿ ವಾಪಸ್ ಬಂದರೆ ಸಾಕು ಎಂದು ಪಾಲಕರು ಆತಂಕಪಡುವಂತಾಗಿದೆ. ಮಕ್ಕಳ ಮೇಲೆ ಪಾಲಕರು ಹೆಚ್ಚಿನ ನಿಗಾ ವಹಿಸುವುದು ಅಗತ್ಯ ಎಂದರು.


ವಕೀಲ ಬಿ.ಸಿ.ರಾಜೇಶ್ ಮಾತನಾಡಿದರು. ಬಿಜಿಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಹೇಶ್ ಹೊಡೆನೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಕಾರ್ಯದರ್ಶಿ ಎಂ.ಕೆ.ದೇವರಾಜ್, ವಕೀಲರಾದ ಶಂಕರಯ್ಯ, ಜಿ.ಡಿ. ಮಹೇಶ್ ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net