

ಹನೂರು: ತಾಲೂಕಿನ ಗ್ರಾಮವೊಂದರ ವ್ಯಕ್ತಿಯೊಬ್ಬನಿಗೆ ಹೆಂಡತಿ ಹಾಗೂ ಮಗು ಇದ್ದರೂ ಕಾನೂನು ಬಾಹಿರವಾಗಿ 16 ವರ್ಷದ ಅಪ್ರಾಪ್ತತೆಯೊಂದಿಗೆ ಸಂಸಾರ ಮಾಡುವ ಸಲುವಾಗಿ ಬೇರೆಡೆ ಇರಿಸಿದ್ದ ಆರೋಪಿಯನ್ನು ಬುಧವಾರ ಮಹದೇಶ್ವರ ಬೆಟ್ಟ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಪೊನ್ನಾಚಿ ಗ್ರಾಮದ ಮಣಿಕಂಠ ಬಂಧಿತ ಆರೋಪಿ. ಈತನಿಗೆ ಹೆಂಡತಿ ಹಾಗೂ 4 ವರ್ಷದ ಮಗು ಇದೆ. ಆದರೂ ಈತ 16 ವರ್ಷದ ಅಪ್ರಾಪ್ತೆಯನ್ನು ಪುಸಲಾಯಿಸಿ ಸಂಸಾರ ನಡೆಸುವ ಸಲುವಾಗಿ ಬೇರೆ ತಾಲೂಕಿನ ಮನೆಯೊಂದರಲ್ಲಿ ಇರಿಸಿದ್ದನು. ಈ ಸಂಬಂಧ ಅಪ್ರಾಪ್ತೆಯ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಅಪ್ರಾಪ್ತೆಯನ್ನು ತಾಯಿಯ ವಶಕ್ಕೆ ನೀಡಲಾಗಿದೆ.