

ಶಿವಮೊಗ್ಗ: ನಗರದಲ್ಲಿ ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ನೀಡಿದ್ದ ವ್ಯಕ್ತಿಗೆ ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಪ್ರಧಾನ ನ್ಯಾಯಾಲಯದ ಎಫ್‌ಟಿಎಸ್‌ಸಿ(ತ್ವರಿತ ವಿಶೇಷ ನ್ಯಾಯಾಲಯ)-2(ಪೋಕ್ಸೊ)ರ ನ್ಯಾಯಾಧೀಶರು 20 ವರ್ಷ ಕಠಿಣ ಜೈಲು ಮತ್ತು 1.50 ಲಕ್ಷ ರೂ. ದಂಡ ವಿಧಿಸಿದ್ದಾರೆ.
ಶಿವಮೊಗ್ಗ ಟೌನ್ 27 ವರ್ಷದ ವ್ಯಕ್ತಿ ಶಿಕ್ಷೆಗೆ ಒಳಗಾದವ. ಈತ 2022ರಲ್ಲಿ 14 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ. ಈ ಬಗ್ಗೆ ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖಾಧಿಕಾರಿಯಾಗಿದ್ದ ಶಿವಮೊಗ್ಗ ಉಪ ವಿಭಾಗ-ಎ ಡಿವೈಎಸ್ಪಿ ಬಾಲರಾಜ್ ಅವರು ವ್ಯಕ್ತಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಷಣ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವ್ಯಕ್ತಿಗೆ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ. ದಂಡ ಕಟ್ಟಲು ವಿಫಲನಾದಲ್ಲಿ ಹೆಚ್ಚುವರಿ 9 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕ ಹರಿಪ್ರಸಾದ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.