

ಬಸವಕಲ್ಯಾಣ: ಬೈಕ್ ಚಲಾಯಿಸುವಾಗ ಪ್ರತಿಯೊಬ್ಬರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಹೆಲ್ಮೆಟ್ ಧರಿಸದವರಿಗೆ ಪೈನ್ ಹಾಕಬೇಕು. ಅಪ್ರಾಪ್ತ ಮಕ್ಕಳಿಗೆ ಬೈಕ್ ಕೊಡುವ ಪಾಲಕರ ವಿರುದ್ಧ ಕೇಸ್ ಹಾಕಿ ೨೫ ಸಾವಿರ ರೂ.ದಂಡ ವಿಧಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಚನ್ನಪ್ಪ ಹೇಳಿದರು.
ನಗರದಲ್ಲಿ ೩೬ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ನಿಮಿತ್ತ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಬಸವಕಲ್ಯಾಣ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಜನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಸ್ತೆ ಅಪಘಾತದಲ್ಲಿ ಮೃತಪಟ್ಟರೆ ಕುಟುಂಬ ಸಂಕಷ್ಟಕೆ ಸಿಲುಕುತ್ತದೆ. ಗಾಯಗೊಂಡರೆ ತೊಂದರೆ ಅನುಭವಿಸಬೇಕಾಗುತ್ತದೆ. ಸುರಕ್ಷತೆಗಾಗಿ ಅಪಾಯ ತಪ್ಪಿಸಲು ಸಂಚಾರಿ ನಿಯಮ ಪಾಲಿಸಬೇಕು. ಮುಂಜಾಗ್ರತಾ ಕ್ರಮಕೈಗೊಳ್ಳಬೇಕು. ಈ ಕುರಿತು ಜನರಲ್ಲಿ ಜಾಗೃತ ಮೂಡಿಸುವಲ್ಲಿ ಸಾರಿಗೆ ಇಲಾಖೆ ಪಾತ್ರ ಮಹತ್ವದ್ದು ಎಂದರು.
ಸಹಾಯಕ ಆಯುಕ್ತ ಮುಕುಲ ಜೈನ್ ಮಾತನಾಡಿ, ಸುರಕ್ಷತೆಗಾಗಿ ಸಂಚಾರಿ ನಿಯಮ ಪ್ರತಿಯೊಬ್ಬರೂ ಪಾಲಿಸುವುದು ಅವಶ್ಯಕವಾಗಿದ್ದು, ಈ ಕುರಿತು ಜಾಗೃತಿ ಮೂಡಿಸುವುದು ಅವಶ್ಯಕ. ಬೈಕ್ ಸವಾರರು ಹೆಲ್ಮೆಟ್ ಧರಿಸಲೇಬೇಕು ಎಂದು ತಿಳಿಸಿದರು.
ಸಿವಿಲ್ ನ್ಯಾಯಾಧೀಶ ಜ್ಞಾನೇಶ್ವರ ವಿಠ್ಠಲ್ ಮಾಳಗೆ, ತಹಸೀಲ್ದಾರ್ ಡಾ. ದತ್ತಾತ್ರೇಯ ಗಾದಾ, ಪಿಪಿ ಬಸವಂತರೆಡ್ಡಿ, ಎಪಿಪಿಗಳಾದ ಅರವಿಂದ, ಜಗದೇವಿ ಚೊಂಡೆ, ಬಾಲಾಜಿ ಅದೆಪ್ಪ, ಸಿಪಿಐ ಅಲಿಸಾಬ್, ಪಿಎಸ್‌ಐ ಸುರೇಶ ಹಚ್ಚರಗಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಕೆ.ಬಿರಾದಾರ, ಕಚೇರಿ ಅಧೀಕ್ಷಕಿ ರಾಧಿಕಾ, ಹಿರಿಯ ಮೋಟಾರು ವಾಹನ ನಿರೀಕ್ಷಕರಾದ ಪರಮಾನಂದ ಸಜ್ಜನ, ರಾಜಕುಮಾರ ಚಪ್ಟೆ, ಚಾಲನಾ ತರಬೇತಿ ಪ್ರಾಚಾರ್ಯ ರಾಜಕುಮಾರ ಭೋಸ್ಲೆ, ಧನರಾಜ, ಶರೀಫ್‌ಖಾನ್ ಪಟೇಲ್, ಬಸವಕುಮಾರ ಚಿಂಚೋಳೆ, ಅನುಕುಮಾರ ಇತರರಿದ್ದರು.
ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ನಿಮಿತ್ತ ನಗರದ ಪ್ರಮುಖ ರಸ್ತೆಗಳಲ್ಲಿ ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸದೇ ವಾಹನ ಚಾಲನೆ ಬೇಡನ್ನುವ ಘೋಷ ವಾಕ್ಯದೊಂದಿಗೆ ಜನ ಜಾಗೃತಿ ಜಾಥಾ ನಡೆಯಿತು. ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.