ಅಪ್ರತಿಮ ಯೋಗಿ ಕುಮಾರ ಶಿವಯೋಗಿ

17Naregal1
Published on

ನರೇಗಲ್ಲ: ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ಸುಸಂಸ್ಕೃತ ಸಮಾಜ ನಿರ್ವಣದ ಶಕ್ತಿ ಹೊಂದಿರುವ ವೀರಶೈವ ಲಿಂಗಾಯತ ಸಮಾಜದಲ್ಲಿ ಗುರು ವಿರಕ್ತರನ್ನು ಒಂದು ಮಾಡಿದ ಹಾನಗಲ್ಲ ಲಿಂ. ಕುಮಾರಶಿವಯೋಗಿಗಳು ಜಗದ ಜಗದ್ಗುರುಗಳು. ಪುರಾಣ ಕೀರ್ತನ ಗಾಯನ ಕಲಾವಿದರನ್ನು ಸಿದ್ಧಗೊಳಿಸಿ ವಚನ ಹಾಗೂ ಧರ್ಮ ಪ್ರಚಾರದ ಕಾರ್ಯಕ್ಕೆ ಅಣಿಗೊಳಿಸಿ ಯಶಸ್ವಿಯಾದರು ಎಂದು ಬೀಳಗಿ ವಿರಕ್ತಮಠದ ಶಿವಲಿಂಗ ಸ್ವಾಮೀಜಿ ಹೇಳಿದರು.

ಸಮೀಪದ ನಿಡಗುಂದಿಕೊಪ್ಪದ ಶಾಖಾ ಶಿವಯೋಗ ಮಂದಿರದಲ್ಲಿ ಭಾನುವಾರ ಸಂಜೆ ಜರುಗಿದ ಲಿಂ. ಹಾನಗಲ್ಲ ಕುಮಾರ ಶಿವಯೋಗಿಗಳ 90ನೇ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವದ ಧಾರ್ವಿುಕ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಕುಮಾರ ಶಿವಯೋಗಿ ಶ್ರೀಗಳು ನಾಡು ಕಂಡ ಅಪ್ರತಿಮ ಯೋಗಿ. ಬಸವಾದಿ ಶರಣರು ಮಾಡಿದ ಸಮಾಜಮುಖಿ ಕಾರ್ಯದ ಜತೆಗೆ ಅಂಧರಿಗೆ ಗೌರವ ಬರುವಂತಹ ಗಾನ ವಿದ್ಯೆ ದಯಪಾಲಿಸಿದ ಹಾನಗಲ್ಲ ಲಿಂ. ಕುಮಾರಶಿವಯೋಗಿಗಳು ಕಾವಿಗೆ ಗೌರವ ತಂದುಕೊಟ್ಟಿದ್ದಾರೆ. ಜಾತಿ ಹೆಸರಿನ ಉತ್ಸವಗಳು ಬೇಕಾಗಿಲ್ಲ. ಶರಣರ ಧರ್ಮ ಕಾರ್ಯವನ್ನು ಜಾತಿ ಧರ್ಮ ಕಾರ್ಯವಾಗಿಸುವುದು ಬೇಡ. ಸಂಸ್ಕಾರ ರಹಿತ ಶಿಕ್ಷಣ ಪಡೆದ ಮಕ್ಕಳು ಇಂದು ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ತಳ್ಳುತ್ತಿದ್ದಾರೆ. ಸದಾಚಾರ ಸಂಪನ್ನ ಸಮಾಜದ ಕನಸು ನನಸಾಗಲು ಎಲ್ಲರೂ ಮನಸ್ಸು ಮಾಡಬೇಕು ಎಂದರು.

ನಿಡಗುಂದಿಕೊಪ್ಪದ ಶಾಖಾ ಶಿವಯೋಗ ಮಂದಿರದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ಹಾನಗಲ್ಲ ಲಿಂ. ಗುರು ಕುಮಾರ ಶಿವಯೋಗಿಗಳಿಂದ ಶಿವಯೋಗ ಮಂದಿರ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆ ಸ್ಥಾಪನೆಯಾಗದೇ ಇದ್ದಿದ್ದರೆ ಇಂದು ವೀರಶೈವ ಸಮಾಜ ಹರಿದು ಹಂಚಿ ಹೋಗುತ್ತಿತ್ತು. ತಮ್ಮ ನಂತರ ಸಮಾಜದ ಹಿತಕ್ಕಾಗಿ ಬದುಕುವವರ ಸಂಖ್ಯೆ ಹೆಚ್ಚಾಗಬೇಕು, ಸಮಾಜಕ್ಕೆ ಧಾರ್ವಿುಕ, ಅದ್ಯಾತ್ಮ ಜಾಗೃತಿ ನೀಡುವಂತವರು ತಯಾರಾಗಲಿ ಎನ್ನುವ ಸುದುದ್ದೇಶದಿಂದ ಶ್ರೀಮದ್ ಶಿವಯೋಗಮಂದಿರ ಸ್ಥಾಪಿಸಿದ ಕೀರ್ತಿ ಕುಮಾರಶಿವಯೋಗಿಗಳಿಗೆ ಸಲ್ಲುತ್ತದೆ ಎಂದರು.

ಯಲಬುರ್ಗಾದ ಶ್ರೀಧರ ಮುರಡಿಮಠದ ಬಸವಲಿಂಗ ಸ್ವಾಮೀಜಿ, ಜಿಗೇರಿಯ ಸಿದ್ಧೇಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಮಲ್ಲಯ್ಯ ಮೂದಿನೂರಮಠ, ಅನ್ನಪೂರ್ಣ ಮನ್ನಾಪೂರ, ವಿಶಾಲಾಕ್ಷಿ ಹಿರೇಮಠ, ಶಿವಸಂಗಪ್ಪ ಕಮತರ, ಶರಣಪ್ಪ ಅಂಗಡಿ, ಶರಣಪ್ಪ ಅರಮನಿ, ಕೃಷ್ಣಪ್ಪ ಜುಟ್ಲ ಇತರರಿದ್ದರು. ಶಿಕ್ಷಕ ಆರ್.ವಿ. ಬೆಲ್ಲದ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net