

ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯವಿದ್ಯಾ ಸಂಶೋಧನಾಲಯವು ಶೃಂಗೇರಿಯ ಜಗದ್ಗುರು ಶ್ರೀಶಂಕರಾಚಾರ್ಯ ಮಹಾಸಂಸ್ಥಾನ ಶಾರದಾ ಪೀಠದೊಂದಿಗೆ ಅಪ್ರಕಟಿತ ಹಸ್ತಪ್ರತಿಗಳನ್ನು ಪುಸ್ತಕ ರೂಪದಲ್ಲಿ ತರಲು ಒಡಂಬಡಿಕೆಗೆ ಮಾಡಿಕೊಂಡಿದೆ.
ಇದರ ಅಡಿಯಲ್ಲಿ ವಿದ್ವಾಂಸರ ಮೂಲಕ ಅಪ್ರಕಟಿತವಾದ ಅಂದಾಜು 13,000 ಹಸ್ತಪ್ರತಿಗಳಲ್ಲಿರುವ ಕೃತಿಗಳ ವರ್ಣನಾತ್ಮಕ ಸೂಚಿಯನ್ನು ಮಾಡಲು, ಆಯ್ದ ಕೃತಿಗಳನ್ನು ಪುಸ್ತಕರೂಪದಲ್ಲಿ ಮುದ್ರಿಸಲು ಮತ್ತು ಡಿಜಿಟಲೀಕರಣ ಮಾಡಿ ಕ್ಯಾಟಲಾಗ್ ಮಾದರಿ ರೂಪಿಸಲು ನಿರ್ಧರಿಸಲಾಗಿದೆ.
92,40,000 ರೂ. ಅಂದಾಜು ವೆಚ್ಚದ ಈ ಯೋಜನೆಗೆ ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ಎಂ.ಕೆ.ಸವಿತಾ ಹಾಗೂ ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿ ಪಿ.ಎ.ಮುರಳಿ ಅವರು ಗುರುವಾರ ಒಪ್ಪಂದಕ್ಕೆ ಸಹಿ ಹಾಕಿದರು. ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿರ್ದೇಶಕ ಡಾ.ಡಿ.ಪಿ.ಮಧುಸೂದನಾಚಾರ್ಯ, ಕುಲಸಚಿವ (ಮೌಲ್ಯಮಾಪನ)ಪ್ರೊ.ನಾಗರಾಜ್ ಇದ್ದರು.