ಅಪ್ಪು ನೆನಪಿನಲ್ಲಿ ಜೀವಧಾರ ರಕ್ತನಿಧಿ ಕೇಂದ್ರದಿಂದ ಸೇವಾ ಕಾರ್ಯ

4
Published on

ಮೈಸೂರು: ಪುನೀತ್ ರಾಜ್‌ಕುಮಾರ್ ಅವರ ಮೊದಲನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ನಗರದ ನ್ಯೂ ಸಯ್ಯಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದ ಆವರಣದಲ್ಲಿ ವಿವಿಧ ಸೇವಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು.
200ಕ್ಕೂ ಹೆಚ್ಚು ಜನ ಸ್ವಯಂಪ್ರೇರಿತ ರಕ್ತದಾನ ಮಾಡಿದರೆ, 50ಕ್ಕೂ ಹೆಚ್ಚು ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು. ಅಲ್ಲದೇ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ಲೋಹಿತ್ ಸಂಗೀತವಾದ್ಯ ಸಂಸ್ಥೆಯಿಂದ ಅಪ್ಪು ಗಾಯನ ನಮನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಮಾತನಾಡಿ, ಜನನವಾದ ಮೇಲೆ ಮರಣ ನಿಶ್ಚಿತವಾದರೂ ಮರಣಿಸಿದ ನಂತರವೂ ಜನರ ಮನಸ್ಸಿನಲ್ಲಿ ಜೀವಂತವಾಗಿರುವಂತೆ ಬದುಕಬೇಕು. ಅಂಥ ಬದುಕು ಪುನೀತ್ ರಾಜ್‌ಕುಮಾರ್ ಅವರದ್ದಾಗಿದೆ ಎಂದು ಬಣ್ಣಿಸಿದರು.
ಸಂತ ಕಬೀರರು ಹೇಳಿದಂತೆ ನಾವು ಮರಣಿಸಿದಾಗ ಜನರಿಗೆ ದುಃಖವಾದರೆ ಅದು ಸಾರ್ಥಕದ ಬದುಕು. ಎಷ್ಟು ವರ್ಷ ಬದುಕಿದ್ದೇವೆ ಎನ್ನುವುದಕ್ಕಿಂತ ಹೇಗೆ ಬದುಕಿದ್ದೇವೆ ಎನ್ನುವುದು ಮುಖ್ಯ. ಕೇವಲ 46 ವರ್ಷ ಬದುಕಿದರೂ ಪುನೀತ್ ಸಾವಿರಾರು ಜನರಿಗೆ ಆಸರೆಯಾಗಿದ್ದರು. ಅನೇಕ ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಯಾವುದೆ ಪ್ರಚಾರ ಬಯಸದೆ ಧನಸಹಾಯ ಮಾಡಿದ್ದರು ಎಂದರು.
ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿ, ಚಿತ್ರರಂಗದಲ್ಲಿದ್ದರೂ ಪುನೀತ್ ಸಮಾಜ ಸೇವೆಯಲ್ಲೂ ತೊಡಗಿದ್ದರು. ಅವರ ಅಭಿಮಾನಿಗಳು ಅವರಂತೆ ಒಳ್ಳೆಯ ಕೆಲಸ ಮಾಡುವ ಸಂಕಲ್ಪ ಕೈಗೊಳ್ಳಬೇಕು ಎಂದರು.
ಸಮಾಜ ಸೇವಕರಾದ ಮಹೇಂದ್ರ ಸಿಂಗ್ ಕಾಳಪ್ಪ, ಮುಡಾ ಮಾಜಿ ಸದಸ್ಯೆ ಲಕ್ಷ್ಮೀದೇವಿ, ಮುಖಂಡರಾದ ಸವಿತಾ ಘಾಟ್ಕೆ, ಕೇಬಲ್ ವಿಜಿ, ಆಟೋ ಸದಾಶಿವ, ಚಂದ್ರು, ವಿದ್ಯಾ, ಬ್ಲಡ್ ಆನ್ ಕಾಲ್ ಕ್ಲಬ್ ಮೈಸೂರು ಸಂಸ್ಥೆಯ ದೇವೇಂದ್ರ ಪರಿಹಾರಿಯ, ಆನಂದ್ ಮಂಡೂತ್, ಕೆ.ಆರ್.ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಅಹಿಂದ ನಟರಾಜ್ ಇತರರು ಇದ್ದರು.
ನರೇಂದ್ರ ಮೋದಿ ಸೇವಾ ಟ್ರಸ್ಟ್, ಸಮಾಜ ಸೇವಾ ಟ್ರಸ್, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ, ಸೇವಾ ಭಾರತಿ, ಲಯನ್ಸ್ ಜೀವಧಾರ ರಕ್ತನಿಧಿ ಕೇಂದ್ರದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net