

ಚಾಮರಾಜನಗರ: ಅಪ್ಪು 50 ವರ್ಷ ಅಪ್ಪಪ್ಪಾ, ಚೆನ್ನಾಗಿದ್ದೀಯ ಮಗನೇ, ನೀನಿನ್ನೂ ಮಗು ಅಂದುಕೊಂಡಿದ್ದೀನಿ. ಒಂದು ಸಲ ಬಂದು ನೋಡಿಕೊಂಡು ಹೋಗ ಕಂದ ನನ್ನ. ನಿನ್ನ ನೋಡುಬಿಡ್ತೀನಿ...!
ಇದು ಅನಾರೋಗ್ಯದ ಹಿನ್ನೆಲೆಯಲ್ಲಿ ಪುನೀತ್‌ರಾಜ್‌ಕುಮಾರ್ ನಿಧನರಾಗಿರುವ ವಿಚಾರವನ್ನೇ ತಿಳಿಯದ ಗಾಜನೂರಿನಲ್ಲಿರುವ ಸೋದರ ಅತ್ತೆ ನಾಗಮ್ಮ ಅಭಿಮಾನಿಗಳ ದೈವ ಅಪ್ಪು ಅವರ 50ನೇ ವರ್ಷದ ಹುಟ್ಟುಹಬ್ಬಕ್ಕೆ ಶುಭಕೋರಿರುವ ಪರಿ.
ಪುನೀತ್ ಜನ್ಮದಿನಕ್ಕೆ ಅತ್ತೆ ನಾಗಮ್ಮ ಶುಭ ಕೋರಿರುವ ವಿಡಿಯೋ ವೈರಲ್ ಆಗುತ್ತಿದೆ. ಅಪ್ಪು 50 ವರ್ಷ ಅಪ್ಪಪ್ಪಾ. ಚೆನ್ನಾಗಿದ್ದೀಯ ಮಗನೇ.? ನೀನಿನ್ನೂ ಮಗು ಅಂದುಕೊಂಡಿದ್ದೇನೆ ನಾನು. ಒಂದು ಸಲ ಬಂದು ನೋಡಿಕೊಂಡು ಹೋಗು ಕಂದ ನನ್ನ. ನಿನ್ನ ನೋಡಿಬಿಡ್ತೀನಿ. ಇಷ್ಟುದ್ದನೇ ಇದ್ದೀಯಾ, ದೊಡ್ಡವನಾಗಿದ್ದಿಯಾ ನೋಡಿಬಿಡ್ತೀನಿ ಎಂದು ವಿಡಿಯೋದಲ್ಲಿ ಕೇಳಿಕೊಂಡಿದ್ದಾರೆ.
ಭೂಮಿಗೆ ಬಂದ ಭಗವಂತ ಚಿತ್ರದ ಚಿತ್ರೀಕರಣದ ಸಂದರ್ಭವನ್ನು ನೆನೆದ ನಾಗಮ್ಮ, ಚಿತ್ರೀಕರಣದ ವೇಳೆ ಅಪ್ಪು ಸುತ್ತ ಾರಿನರ್ಸ್‌ಗಳು ತುಂಬಿಕೊಂಡುಬಿಟ್ಟಿದ್ದರು. ಎಲ್ಲ ಗಾಡ್ ಗಾಡ್ ಎಂದು ನಮಸ್ಕಾರ ಮಾಡಿ ೆಟೋ ತೆಗೆದುಕೊಂಡರು. ಕಾಲಿಗೆ ನಮಸ್ಕಾರ ಮಾಡಿಕೊಂಡಿದ್ದರು. ಆವತ್ತು ಶೂಟಿಂಗ್ ಮಾಡಲೇ ಇಲ್ಲ ಎಂದು ನೆನೆದು ಕೊನೆಗೆ ಒಂದು ಸಲ ಬಂದು ನೋಡಿಕೊಂಡು ಹೋಗು ಕಂದ ನನ್ನ ಅಂತ ಕೇಳಿಕೊಂಡರು.
ಸಾವಿನ ವಿಷಯ ತಿಳಿಸಿಲ್ಲ:
ಡಾ.ರಾಜ್ ಸಹೋದರಿ ನಾಗಮ್ಮಗೆ ಸುಮಾರು 93 ವರ್ಷ. ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಪುನೀತ್ ಸಾಯುವ ಕೆಲವು ದಿನಗಳ ಹಿಂದಷ್ಟೇ ನಾಗಮ್ಮ ತೀವ್ರ ಅನಾರೋಗ್ಯದಿಂದ ಆಸ್ಪತ್ರೆ ಸೇರಿ ಚೇತರಿಸಿಕೊಂಡಿದ್ದರು. ನಾಗಮ್ಮ ಅವರಿಗೆ ಅಘಾತ ಉಂಟಾಗಿ ಜೀವಕ್ಕೆ ಹಾನಿಯಾಗಬಾರದು ಎಂಬ ಕಾರಣಕ್ಕೆ ಪುನೀತ್‌ರಾಜ್‌ಕುಮಾರ್ ಅವರ ನಿಧನದ ವಿಚಾರವನ್ನು ಇದುವರೆಗೂ ತಿಳಿಸಿಲ್ಲ. ಪ್ರತ್ಯೇಕ ಕೊಠಡಿಯಲ್ಲಿ ನಾಗಮ್ಮ ಶುಶ್ರೂಷೆಯಲ್ಲಿದ್ದಾರೆ. ಪತ್ರಿಕೆ, ಟಿವಿ ತೋರಿಸುವುದಿಲ್ಲ. ಹೊರಗಿನ ಯಾರಿಂದಲೂ, ಯಾವ ವಿದ್ಯಾಮಾನಗಳಲ್ಲೂ ಪುನೀತ್ ಸಾವಿನ ವಿಚಾರ ತಿಳಿಸದೆ ಗೌಪ್ಯತೆ ಕಾಪಾಡಿಕೊಂಡು ಬರಲಾಗುತ್ತಿದೆ. ಹೀಗಾಗಿ ಸೋದರ ಅತ್ತೆ ನಾಗಮ್ಮ ಪಾಲಿಗೆ ಅಪ್ಪು ಜೀವ ನಿಜ ಜೀವಂತಿಕೆಯಿಂದ ಕೂಡಿದೆ.
ನಾಗಮ್ಮ ಅವರಿಗೆ ಜ್ಞಾಪಕ ಶಕ್ತಿ ತುಂಬಾ ಚೆನ್ನಾಗಿದೆ. ಹಿಂದಿನ ಘಟನೆಗಳನ್ನು, ವಿಶೇಷ ದಿನಗಳನ್ನು ನೆನಪಿನಲ್ಲಿಡುತ್ತಾರೆ. ಅಪ್ಪು ಹುಟ್ಟುಹಬ್ಬವೂ ಹೀಗೆ ಗೊತ್ತಾಗಿದೆ. ೆನ್ ಮಾಡಿಕೊಡಿ ಮಾತನಾಡಬೇಕು ಎಂದು ಕೇಳಿಕೊಳ್ಳುತ್ತಿದ್ದರು. ಆಗ ಅವರು ಶೂಟಿಂಗ್‌ನಲ್ಲಿ ಬಿಜಿ ಇದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಶುಭಕೋರುವ ಕರೆಗಳು ಸಿಕ್ಕಾಪಟ್ಟೆ ಬರುತ್ತಿರುತ್ತವೆ. ಹೀಗಾಗಿ ಅವರು ಸಂಪರ್ಕ ಸಿಗುವುದಿಲ್ಲ ಎಂದು ಹೇಳಿ ಸಮಾಧಾನ ಪಡಿಸಿ, ವಿಡಿಯೋ ಮೂಲಕ ಶುಭಕೋರಿಸಲಾಯಿತು ಎಂದು ನಾಗಮ್ಮ ಪುತ್ರ ಗಾಜನೂರು ಗೋಪಾಲ್ ತಿಳಿಸಿದ್ದಾರೆ.
ಭೇಟಿ ಕೊಟ್ಟಿದ್ದ ಶಿವಣ್ಣ ದಂಪತಿ:
ಚಿತ್ರನಟ ಶಿವರಾಜ್‌ಕುಮಾರ್ ಮತ್ತು ಗೀತಾ ಶಿವರಾಜ್‌ಕುಮಾರ್ ಮಾ.12ರಂದು ಗಾಜನೂರಿಗೆ ಭೇಟಿ ಕೊಟ್ಟಿದ್ದರು. ಇದು ಶಿವಣ್ಣಗೆ ಅನಾರೋಗ್ಯದಿಂದ ಗುಣಮುಖರಾದ ಬಳಿಕ ಮೊದಲ ಭೇಟಿಯಾಗಿತ್ತು. ಮನೆಗೆ ಆಗಮಿಸಿ ಸೋದರ ಅತ್ತೆ ನಾಗಮ್ಮ ಅವರ ಆರೋಗ್ಯ ವಿಚಾರಿಸಿ ತೆರಳಿದ್ದರು.