

ಚಿತ್ರದುರ್ಗ: ಹಡಪದ ಅಪ್ಪಣ್ಣ ಅವರ ತತ್ವಾದರ್ಶ ಮೈಗೂಡಿಸಿಕೊಂಡರೆ ಸಮಾನತೆ ಜತೆಗೆ ಸಮ ಸಮಾಜ ನಿರ್ಮಿಸಬಹುದು ಎಂದು ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಬಸವಾದಿ ಶರಣರ ವಚನಗಳ ಮಹತ್ವ ಅರಿತು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಿಸಬಹುದು. ಶುದ್ಧ ಮನಸ್ಸಿನಿಂದ ಕಾಯಕ, ಸತ್ಕಾರ್ಯಗಳಲ್ಲಿ ತೊಡಗಿ ದೇಶಕ್ಕೆ ಕೊಡುಗೆ ನೀಡಲು ಕೈಜೋಡಿಸಿ ಎಂದು ಸಲಹೆ ನೀಡಿದರು.
ಸಾಹಿತಿ ಎಂ.ಬಿ.ನಾಗರಾಜ್ ಕಾಕನೂರು ಮಾತನಾಡಿ, ಹಡಪದ ಅಪ್ಪಣ್ಣ ಸೇವಾನಿಷ್ಟರು. ಪ್ರಮಾಣಿಕರಾಗಿದ್ದರು. ಕಲ್ಲಿನಿಂದ ಶಿಲೆ, ಮಣ್ಣಿನಿಂದ ಮಡಕೆ, ಬಿದಿರಿನಿಂದ ಕೊಳಲು, ಸಗಣಿಯಿಂದ ಭಸ್ಮ, ಆಹಾರದಿಂದ ಪ್ರಸಾದ ಹೀಗೆ ಪ್ರತಿಯೊಂದಕ್ಕೂ ಸಂಸ್ಕಾರ ನೀಡಿದರೆ, ನರನು ಹರನಾಗಬಲ್ಲ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಿದ ಮಹಾಸಂತ ಎಂದು ಸ್ಮರಿಸಿದರು.
12ನೇ ಶತಮಾನದ ಶಿವಶರಣರು ಕೆಲವರ ಸ್ವತ್ತಾಗಿದ್ದ ಜ್ಞಾನವನ್ನು ಸರ್ವರ ಸಂಪತ್ತಾಗಲು ಶ್ರಮಿಸಿದರು. ಕಾಯಕ ಸಿದ್ಧಾಂತದ ಮೂಲಕ ಹೊಸ ಆರ್ಥಿಕ ನೀತಿ ರಚಿಸಿದರು. ಲಿಂಗ ಜಾತಿಯದ್ದಲ್ಲ, ಅದು ಜ್ಯೋತಿಯ ಸೂಚಕವೆಂದು ಹೇಳಿದ ಮಹನೀಯರು ಎಂದು ಬಣ್ಣಿಸಿದರು.
ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ರಂಗನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ, ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಅಧ್ಯಕ್ಷ ಬಿ.ಕೆ.ಜಯಪ್ಪ, ಕಾರ್ಯದರ್ಶಿ ಎಲ್.ಆರ್.ವೀರಭದ್ರಪ್ಪ ಲೋಕದೊಳಲು, ತಾಲೂಕು ಅಧ್ಯಕ್ಷ ವೃಷಬೇಂದ್ರಪ್ಪ, ಜಿಲ್ಲಾ ಸಂಚಾಲಕ ಟಿ.ಸಿ.ಶಿವಪ್ರಕಾಶ್, ಹಾಸ್ಯ ಸಾಹಿತಿಗಳಾದ ಜಗನ್ನಾಥ್, ವೇದಮೂರ್ತಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಚಿದಾನಂದಪ್ಪ, ಉಮೇಶ್ ಪತ್ತಾರ ಇತರರಿದ್ದರು.