

ದೇವದುರ್ಗ: ಕರ್ನಾಟಕದಲ್ಲಿ ವೀರ ಮಹಿಳೆಯರು ರಾಜ್ಯಭಾರ ಆಡಳಿತ ಮಾಡಿದ ಇತಿಹಾಸವಿದೆ. ಕೆಳದಿ ಚನ್ನಮ್ಮ, ರಾಣಿ ಅಬ್ಬಕ್ಕ, ಚನ್ನ ಬೈರಾದೇವಿ, ಬೆಳವಡಿ ಮಲ್ಲಮ್ಮ, ಕಿತ್ತೂರುರಾಣಿ ಚನ್ನಮ್ಮ ಸೇರಿ ಅನೇಕ ವೀರ ಮಹಿಳೆಯರು ದೇಶ ಮತ್ತು ಧರ್ಮರಕ್ಷಣೆಗಾಗಿ ತ್ಯಾಗ-ಬಲಿದಾನ ಮಾಡಿದ್ದಾರೆ. ಚನ್ನಮ್ಮ ಅಪ್ಪಟ್ಟ ದೇಶಾಭಿಮಾನಿಯಾಗಿದ್ದಾರೆ ಎಂದು ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ ಹೇಳಿದರು.
ಪಟ್ಟಣದ ಮಿನಿವಿಧಾನಸೌಧ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ವೀರರಾಣಿ ಕಿತ್ತೂರು ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.
ಬ್ರಿಟಿಷರ ದಮನಕಾರಿ ನೀತಿ, ಅನೈತಿಕ ಆಡಳಿತದ ಕುತಂತ್ರಗಳು ಚನ್ನಮ್ಮ ಅವರನ್ನು ಕೆರಳಿಸಿತು. ಭಾರತದ ಸಿಪಾಯಿ ದಂಗೆ 1857ರಲ್ಲಿ ಸ್ಫೋಟಗೊಂಡರೆ ಕಿತ್ತೂರಿನಲ್ಲಿ 1824ರಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ವೀರರಾಣಿ ಚನ್ನಮ್ಮ ಹರಡಿಸಿದರು.
ಅಂದಿನ ಬ್ರಿಟಿಷರ ಆಡಳಿತ ಅಧಿಕಾರಿ ಥ್ಯಾಕರೆ ಅಪಾರವಾದ ಸೈನ್ಯದೊಂದಿಗೆ ಕಿತ್ತೂರ ಸಂಸ್ಥಾನದ ಮೇಲೆ ದಾಳಿಯನ್ನು ನಡೆಸಿದನು. ಈ ದಾಳಿಗೆ ಕಿತ್ತೂರು ಚನ್ನಮ್ಮ ಎದೆಗುಂದದೆ ವೀರಾವೇಶದಿಂದ, ಸಂಗೋಳಿ ರಾಯಣ್ಣ, ಅಮಟೂರು ಬಾಳಪ್ಪ, ಗುರುಸಿದ್ದಪ್ಪ ಸಹಕಾರದೊಂದಿಗೆ ಬ್ರಿಟಿಷ್ ಸೈನ್ಯವನ್ನು ಸಂಪೂರ್ಣವಾಗಿ ಸದೆಬಡಿದರು. ಚನ್ನಮ್ಮರ ಆದರ್ಶ ಜೀವನ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದೆ ಎಂದರು.
ಉಪತಹಸೀಲ್ದಾರ್ ವೆಂಕಟೇಶ ಕುಲಕರ್ಣಿ, ದೈಹಿಕ ಶಿಕ್ಷಣಾಧಿಕಾರಿ ಮುದುಕಪ್ಪ ಕವಡಿಮಠ, ಶರಣಯ್ಯ ಸ್ವಾಮಿ, ಹನುಮಂತರಾಯ ನಾಯಕ, ಅಭಿಷೇಕ, ರಂಗಪ್ಪ ಬಲ್ಲಿದವ್ ಕೋತಿಗುಡ್ಡ, ಬಸವರಾಜ, ದೀಪಾ, ಪಾರ್ವತಿ, ಸರಸ್ವತಿ, ಅಭಿಷೇಕ್, ಶಿವಕುಮಾರ ಛಲವಾದಿ ಇತರರಿದ್ದರು.