

ಬೆಳಗಾವಿ: ಸರ್ಕಾರ ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ‘ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ’ ಎಂದು ಮರುನಾಮಕರಣ ಮಾಡಿ ಅರ್ಧ ವರ್ಷ ಸಮೀಪಿಸುತ್ತಿದ್ದರೂ, ಅಧಿಕಾರಿಗಳು ಮಾತ್ರವಲ್ಲ, ಇಲಾಖೆಯ ಮುಖ್ಯ ವೆಬಸೈಟ್ ಸಹ ಅಪ್ಡೇಟ್ ಆಗಿಲ್ಲ.
ಹೊಸ ಹೆಸರಿಟ್ಟು ಐದು ತಿಂಗಳಾದರೂ ವೆಬ್ ಸೈಟ್‌ನಲ್ಲಿ ಮಾತ್ರ ಸಾರ್ವಜನಿಕ ಶಿಕ್ಷಣ ಇಲಾಖೆ ಎಂಬ ಪದನಾಮವೇ ಇದೆ. ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲಿ ಹೊಸ ಹೆಸರಿಟ್ಟು ಬದಲಾವಣಿಗೆ ಒಗ್ಗಿಕೊಂಡಿದ್ದಾರೆ. ಆದರೆ, ರಾಜ್ಯದ ಅಧಿಕಾರಿಗಳು ಮಾತ್ರ ಇನ್ನು ನಿದ್ರೆಯಲ್ಲಿರುವಂತೆ ವರ್ತಿಸುತ್ತಿರುವುದು ಶೈಕ್ಷಣಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ನೀಡುವ ಆದೇಶದಲ್ಲಿ ಕೆಲವೊಮ್ಮೆ ‘ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ’ ಮತ್ತೊಮ್ಮೆ ಸಾರ್ವಜನಿಕ ಶಿಕ್ಷಣ ಇಲಾಖೆ ಎಂದು ಬಳಸುತ್ತಿದ್ದು, ಜಿಲ್ಲಾ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇಂದಿಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಎಂದೇ ದಾಖಲೆಗಳನ್ನು ನೀಡುತ್ತಿದ್ದಾರೆ. ಇನ್ನುಳಿದ ಇಲಾಖೆಗಳ ಅಧಿಕಾರಿಗಳೊಂದಿಗೂ ಹಳೇ ಹೆಸರಲ್ಲೇ ಪತ್ರವ್ಯವಹಾರ ಮಾಡುತ್ತಿರುವುದು, ಇನ್ನುಳಿದ ಇಲಾಖೆ ಅಧಿಕಾರಿಗಳಿಗೂ ಅಚ್ಚರಿಯಾಗಿದೆ.
ವಿದ್ಯಾರ್ಥಿಗಳಿಗೆ ದಿನದಿಂದ ದಿನಕ್ಕೆ ಹೊಸತನವನ್ನು ಕಲಿಸಬೇಕಿದ್ದ ಇಲಾಖೆಯು ಹಳೆಯ ಹೆಸರನ್ನೇ ಉಳಿಸಿಕೊಂಡಿರುವ ಮೂಲಕ ಹೊಸತನ ಅಳವಡಿಸಿಕೊಳ್ಳುವಲ್ಲಿ ಹಿಂದುಳಿದಿರುವ ಬಗ್ಗೆ ಶಿಕ್ಷಣ ಪ್ರೇಮಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿದಿನ ಒಂದಿಲ್ಲೊಂದು ಶೈಕ್ಷಣಿಕ ಕಾರ್ಯಗಳಿಂದ ವೆಬ್‌ಸೈಟ್‌ಗೆ ಭೇಟಿ ನೀಡುವ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಣ ಇಲಾಖೆಯಲ್ಲಿ ಇಂತಹ ಅವಾಂತರಗಳು ನಡೆದರೆ ಹೇಗೆ ಎಂದು ಪ್ರಜ್ಞಾವಂತರು ಪ್ರಶ್ನಿಸುವಂತಾಗಿದ್ದು, ಕೋಟ್ಯಂತರ ಮಕ್ಕಳ ಬದುಕಿಗೆ ‘ಅಕ್ಷರದೀಪ ಹಚ್ಚುವ, ಆಡಳಿತ ವ್ಯವಸ್ಥೆಯಲ್ಲಿ ಅಮೂಲಾಗ್ರ ಕೆಲಸಗಳಾಗಬೇಕಾಗಿದೆ.
ರಾಜ್ಯ ಶಿಕ್ಷಣ ಇಲಾಖೆಯ ಆಡಳಿತದಲ್ಲಿ ಮೈಸೂರು, ಧಾರವಾಡ, ಕಲಬುರಗಿ, ಬೆಂಗಳೂರ ಅಂತಾ ನಾಲ್ಕು ವಿಭಾಗಗಳಿವೆ. ಅದರಲ್ಲಿ ಧಾರವಾಡ ಆಯುಕ್ತರ ವ್ಯಾಪ್ತಿಯಲ್ಲಿ 9 ಶೈಕ್ಷಣಿಕ ಜಿಲ್ಲೆ ಹಾಗೂ ನೂರಾರು ತಾಲೂಕುಗಳಿವೆ. ನೂರತನ ಪದನಾಮ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಡಿಡಿಪಿಐಗಳು ಹಾಗೂ ತಾಲೂಕುಗಳಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳು ವಿಫಲರಾಗಿದ್ದು, ಇಂದಿಗೂ ಇಲಾಖೆಯ ಎಲ್ಲ ಕಚೇರಿಗಳ ನಾಮಫಲಕ ಸಾರ್ವಜನಿಕ ಶಿಕ್ಷಣ ಇಲಾಖೆ ಎಂದೇ ಇದೆ. ಈ ಬಗ್ಗೆ ಅಧಿಕಾರಿಗಳನ್ನು ಸಂಪರ್ಕಿಸಿದರೆ, ಜಿಲ್ಲಾ ಉಪನಿರ್ದೇಶಕರ ಕಚೇರಿಗೆ ಇಲಾಖೆಯ ನೂತನ ಪದನಾಮದ ಹೊಸ ನಾಮಫಲಕ ಅಳವಡಿಸುವುದಕ್ಕಾಗಿ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ. ಆದೇಶ ಬಂದ ತಕ್ಷಣವೇ ನೂತನ ಪದನಾಮದ ಬೋರ್ಡ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಶಿಕ್ಷಕರ ನೇಮಕಾತಿ, ವರ್ಗಾವಣೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆ ಹಾಗೂ ಪ್ರೋತ್ಸಾಹದಾಯಕ ಕಾರ್ಯಗಳ ಕುರಿತು ಮಾಹಿತಿಗಾಗಿ ಪ್ರತಿ ದಿನ ಲಕ್ಷಾಂತರ ಜನ ಇಲಾಖೆಯ ವೆಬಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಾರೆ. ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಎಂದೇ ಉಲ್ಲೇಖಿಸುತ್ತಿರುವುದನ್ನು ಗಮನಿಸಿ, ಅನಗತ್ಯಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಅಷ್ಟೇ ಅಲ್ಲ, ವರ್ಗಾವಣೆ ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿ ದಾಖಲೆಗಳನ್ನು ಸ್ವೀಕರಿಸುವ ಸಂದರ್ಭದಲ್ಲಿ ಅಭ್ಯರ್ಥಿಗಳಿಂದ ಹೊಸ ಪದನಾಮಗೊಂಡ ‘ಶಾಲಾ ಶಿಕ್ಷಣ ಮತ್ತು ಸಾರ್ವಜನಿಕ ಇಲಾಖೆ’ ಎಂದು ನಮೂದಿಸುವಂತೆ ಅಧಿಕಾರಿಗಳು ಹೇಳುತ್ತಾರೆ. ಆದರೆ, ತಾವು ಹೊರಡಿಸುವ ಸುತ್ತೋಲೆ ಹಾಗೂ ಜ್ಞಾಪನೆಗಳಲ್ಲಿ ‘ಸಾರ್ವಜನಿಕ ಶಿಕ್ಷಣ ಇಲಾಖೆ’ ಎಂದೇ ನೀಡುತ್ತಿರುವುದು ಶೈಕ್ಷಣಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಅಧಿಕಾರಿಗಳ ಇಬ್ಬಗೆ ನೀತಿ ಮತ್ತಷ್ಟು ಗೊಂದಲವನ್ನುಂಟು ಮಾಡುತ್ತಿದೆ.
ರಾಜ್ಯ ಶಿಕ್ಷಣ ಇಲಾಖೆಯ ವೆಬ್‌ಸೈಟಿನಲ್ಲಿ ಮರಪದನಾಮಗೊಂಡಂತೆ ‘ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ’ ಎಂದು ಈ ದಿನವೇ ಅಪ್ಡೇಟ್ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿನ ಕಚೇರಿಗಳಲ್ಲಿ ನೂತನ ನಾಮಫಲಕವನ್ನು ಅಳವಡಿಸುವಂತೆ ಶೀಘ್ರ ಆಯಾ ಅಧಿಕಾರಿಗಳಿಗೆ ಸೂಚಿಸಲಾಗುವುದು.| ರಿತೇಶಕುಮಾರ್ ಸಿಂಗ್, ಪ್ರಧಾನ ಕಾರ್ಯದರ್ಶಿ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ. ಬೆಂಗಳೂರು
| ಶಿವಾನಂದ ಕಲ್ಲೂರ, ಬೆಳಗಾವಿ