

ಬೆಂಗಳೂರು ಗ್ರಾಮಾಂತರ: ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರ ಪೌಷ್ಟಿಕತೆ ಸ್ಥಿತಿಯನ್ನು ನಿರ್ದಿಷ್ಟ ಅವಧಿಗೆ ಅನುಗುಣವಾಗಿ ಸುಧಾರಿಸುವ ಉದ್ದೇಶದೊಂದಿಗೆ ಪೋಷಣ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ದೊಡ್ಡಬಳ್ಳಾಪುರ ಶಿಶು ಅಭಿವೃದ್ಧಿ ಅಧಿಕಾರಿ ಎಸ್.ಅನಿತಾಲಕ್ಷ್ಮೀ ತಿಳಿಸಿದರು.
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿಯ ಹಾಡೋನಹಳ್ಳಿಯಲ್ಲಿ ಗ್ರಾಮಾಂತರ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಪೋಷಣ್ ಅಭಿಯಾನದಲ್ಲಿ ಮಾತನಾಡಿದರು. ಗ್ರಾಮಾಂತರ ಜಿಲ್ಲೆಯಲ್ಲಿ ಪೋಷಣ್ ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಅಪೌಷ್ಟಿಕತೆ ಮುಕ್ತ ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶ್ರಮಿಸುತ್ತಿದೆ ಎಂದು ಹೇಳಿದರು.
ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾದ ಮಕ್ಕಳೆ ದೇಶದ ಭವಿಷ್ಯದ ಆಸ್ತಿ, ಬಡಮಕ್ಕಳಲ್ಲಿ ಅದರಲ್ಲೂ ಗ್ರಾಮೀಣ ಭಾಗದ ಮಕ್ಕಳಲ್ಲಿ ಪೌಷ್ಟಿಕತೆ ಕೊರತೆ ಕಾಡುವ ಹಿನ್ನೆಲೆಯಲ್ಲಿ ಇದರಿಂದ ಅವರನ್ನು ಹೊರತರುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಸಹಕಾರಿಯಾಗಿದೆ, ಮಕ್ಕಳನ್ನು ಅಪೌಷ್ಟಿಕರತೆಯಿಂದ ಪಾರು ಮಾಡಲು ಸರ್ಕಾರ ಪೋಷಣ್ ಅಭಿಯಾನ ಜಾರಿಗೆ ತಂದಿದೆ ಎಂದರು.
15 ದಿನಗಳಲ್ಲಿ ಹಲವು ಕಾರ್ಯಕ್ರಮ: ಮಾ.15ರಿಂದ ಮಾ.31ರವರೆಗೆ ನಡೆಯುವ ೆಷಣ್ ಅಭಿಯಾನದಲ್ಲಿ ಒಂದೊಂದು ದಿನ ಒಂದೊಂದು ವಿಭಿನ್ನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ, ಆರೋಗ್ಯ ತಪಾಸಣೆ, ಜಾಗೃತಿ ಜಾಥಾ ಕಾರ್ಯಕ್ರಮಗಳ ಮೂಲಕ ಜನರನ್ನು ತಲುಪುವ ಪ್ರಯತ್ನ ಇದಾಗಿದೆ ಎಂದು ಅನಿತಾಲಕ್ಷ್ಮೀ ತಿಳಿಸಿದರು. ಗ್ರಾಮೀಣ ಭಾಗದಲ್ಲಿ ಸಂಚರಿಸಿ ತಾಯಂದಿರು, ಪಾಲಕರಲ್ಲಿ ಪೌಷ್ಟಿಕ ಆಹಾರದ ಮಹತ್ವ ಮತ್ತು ಪ್ರಯೋಜನೆಯ ಬಗ್ಗೆ ಪ್ರಚಾರ ಮಾಡಲಾಗುತ್ತಿದೆ. ಪೌಷ್ಟಿಕ ಅಂಶಗಳಿಂದ ಕೂಡಿರುವ ಹಣ್ಣು, ತರಕಾರಿ, ಧಾನ್ಯ, ಆಹಾರ ಪದಾರ್ಥಗಳ ಸೇವನೆ ಬಗ್ಗೆ ಇಲಾಖೆಯ ಸಿಬ್ಬಂದಿ ವಿವಿಧ ಸಂದೇಶಗಳ ಭಿತ್ತಿಚಿತ್ರಗಳ ಗಮನ ಸೆಳೆಯಲಾಗುತ್ತಿದೆ ಎಂದರು.
ಎದೆಹಾಲು ಅಮೃತ ಸಮಾನ: ಮಗು ಜನಿಸಿದ ಒಂದು ಗಂಟೆಯೊಳಗೆ ತಾಯಿಯ ಎದೆಹಾಲು ನೀಡುವುದು ಮಗುವಿಗೆ ಆ ಹಾಲು ಅಮೃತ ಸಮಾನ ಆದರೆ ಇತ್ತೀಚಿನ ದಿನಗಳಲ್ಲಿ ಇದು ಕಡಿಮೆಯಾಗುತ್ತಿದೆ. ಈ ಬಗ್ಗೆ ಎಲ್ಲರೂ ಜಾಗೃತಿ ವಹಿಸಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚನ್ನಪ್ಪ ಹೇಳಿದರು.
ಗರ್ಭಿಣಿಯರು, ಬಾಣಂತಿಯರು ಯಾವುದೇ ಕಾರಣಕ್ಕೂ ಅಪೌಷ್ಟಿಕತೆಯಿಂದ ಹಾಗೂ ರಕ್ತಹೀನತೆಯಿಂದ ಬಳಲದಂತೆ ಎಚ್ಚರಿಕೆ ವಹಿಸಬೇಕು, ಇಲ್ಲದಿದ್ದರೆ ಎರಡೂ ಜೀವಗಳು ಅನಾರೋಗ್ಯಕ್ಕೆ ತುತ್ತಾಗುವ ಅಪಾಯ ಎದುರಾಗಲಿದೆ ಎಂದರು. 6 ತಿಂಗಳು ಅಂದರೆ 181 ದಿನದ ಬಳಿಕ ಮಕ್ಕಳಿಗೆ ಅನ್ನಪ್ರಾಶನ ಮಾಡಿಸಬೇಕು. ಈ ಮೂಲಕ ಮಕ್ಕಳಿಗೆ ಆಹಾರ ಪದ್ಧತಿ ರೂಢಿಯಾಗಬೇಕು ಎಂದರು. ಶಿಕ್ಷಣ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು, ಸಂಯೋಜಕರು ಹಾಗೂ ಗ್ರಾಪಂ ಸಿಬ್ಬಂದಿ ಸಹಕಾರದಲ್ಲಿ ಈ ಅಭಿಯಾನ ಯಶಸ್ವಿಯಾಗುತ್ತಿದೆ ಎಂದರು.
ಮಕ್ಕಳಿಗೆ ಯೋಗ: ೆಷನ್ ಅಭಿಯಾನದ ಪ್ರಯುಕ್ತ ಹಾಡೋನಹಳ್ಳಿ ಶಾಲೆ ಮಕ್ಕಳಿಗೆ ಯೋಗ ತರಬೇತಿ ಹಮ್ಮಿಕೊಳ್ಳಲಾಗಿತ್ತು, ಉತ್ತಮ ಪೌಷ್ಟಿಕ ಆಹಾರ ಸೇವನೆಯಂತೆ ಪ್ರತಿನಿತ್ಯ ದೈಹಿಕ ಕಸರತ್ತು ಆರೋಗ್ಯಕ್ಕೆ ಅತ್ಯವಶ್ಯಕ ಎಂದು ಇಲಾಖೆ ಸಿಬ್ಬಂದಿ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು.