

ಯಲ್ಲಾಪುರ: ಪಟ್ಟಣದ ಬೆಲ್ ರಸ್ತೆಯ ಪಕ್ಕ ಉಪಖಜಾನೆ ಹಾಗೂ ತಹಸೀಲ್ದಾರ್ ಕಚೇರಿಗೆ ಹೋಗುವ ರಸ್ತೆಯ ಗಟಾರಕ್ಕೆ ಅಡ್ಡ ಸಿಡಿಯ ಎರಡೂ ಬದಿಗೆ ಗಟಾರ ಕಾಮಗಾರಿ ಅಪೂರ್ಣವಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಾಗಿದೆ.
ಎರಡು ವರ್ಷಗಳ ಹಿಂದೆ ಪಟ್ಟಣದ ಬೆಲ್ ರಸ್ತೆಯ ಪಕ್ಕ ಪಕ್ಕಾ ಗಟಾರ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಉಪಖಜಾನೆ ಹಾಗೂ ತಹಸೀಲ್ದಾರ್ ಕಚೇರಿಗೆ ಹೋಗುವ ರಸ್ತೆಯ ಗಟಾರಕ್ಕೆ ಸಿ.ಡಿ ಇದ್ದು, ಇಲ್ಲಿ ಮಳೆಗಾಲದಲ್ಲಿ ದೊಡ್ಡ ಪ್ರಮಾಣದ ನೀರು ಹರಿಯುತ್ತದೆ. ಕಾಮಗಾರಿ ಪೂರ್ಣಗೊಳಿಸದೆ ಕಾಂಕ್ರೀಟ್ ಗಟಾರವನ್ನು ತೆರೆದ ಸ್ಥಿತಿಯಲ್ಲಿ ಹಾಗೇ ಬಿಡಲಾಗಿದೆ. ಅದರಲ್ಲಿ ಮಣ್ಣು, ತ್ಯಾಜ್ಯ ತುಂಬಿದ್ದು, ಮಳೆ ಬಂದರೆ ನೀರು ತುಂಬಿ ರಸ್ತೆಯ ಮೇಲೆ ಹರಿಯುವಂತಾಗಿದೆ.
ಉಪಖಜಾನೆ ಹಾಗೂ ತಹಸೀಲ್ದಾರ್ ಕಚೇರಿಗೆ ಹೋಗುವ ರಸ್ತೆಯಿಂದ ಬರುವ ನೀರು ಬೆಲ್ ರಸ್ತೆಗೆ ನುಗ್ಗುತ್ತದೆ. ಎರಡೂ ಬದಿಗೆ ಅರೆಬರೆ ಕಾಮಗಾರಿ ನಡೆಸಿ ಕಬ್ಬಿಣದ ಸರಳುಗಳನ್ನು ಹಾಗೆ ಬಿಡಲಾಗಿದೆ. ಈ ರಸ್ತೆಯಲ್ಲಿ ತಹಸೀಲ್ದಾರ್ ಕಚೇರಿಗೆ ಹೋಗುವ ವಾಹನ ಸವಾರರು ಸ್ವಲ್ಪ ಅಲಕ್ಷ್ಯ ಮಾಡಿದರೂ ಅಪಾಯ ಉಂಟಾಗುವುದು ಖಚಿತ.
ಮುಖ್ಯರಸ್ತೆಯ ಪಕ್ಕದಲ್ಲಿ ಹಾಗೂ ಸರ್ಕಾರಿ ಕಚೇರಿಯ ಎದುರು ಎರಡು ವರ್ಷಗಳಿಂದ ಅಪೂರ್ಣ ಕಾಮಗಾರಿ ಇದ್ದರೂ ಅದನ್ನು ಪೂರ್ಣಗೊಳಿಸುವ ಕುರಿತು ಯಾವುದೆ ಕ್ರಮ ಕೈಗೊಂಡಿಲ್ಲ. ಸಂಬಂಧಪಟ್ಟವರು ಕೂಡಲೆ ಅಸಮರ್ಪಕ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. | ಶ್ರೀನಿವಾಸ ಗಾಂವ್ಕಾರ, ಪ.ಪಂ. ಮಾಜಿ ಸದಸ್ಯ
ಅಪೂರ್ಣ ಕಾಮಗಾರಿ ಸಮಸ್ಯೆ ಗಮನಕ್ಕೆ ಬಂದಿದೆ. ಸಂಬಂಧಪಟ್ಟ ಗುತ್ತಿಗೆದಾರರಿಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿ, ಶೀಘ್ರ ಸಮಸ್ಯೆ ಪರಿಹರಿಸಲಾಗುವುದು. | ಅರುಣ ನಾಯ್ಕ, ಪ.ಪಂ. ಮುಖ್ಯಾಧಿಕಾರಿ