

ನಿಪ್ಪಾಣಿ: ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ ಅಂತ್ಯಕ್ರಿಯೆ ಚಿಕ್ಕೋಡಿ ತಾಲೂಕಿನ ವಾಳಕಿ ಗ್ರಾಮದ ನಿವಾಸದ ಬಳಿರುವ ಸ್ಮಶಾನದಲ್ಲಿ ವಿವಿಧ ಪಕ್ಷದ ನಾಯಕರು, ಕಾರ್ಯಕರ್ತರು ಹಾಗೂ ಅಪಾರ ಬೆಂಬಲಿಗರ ಸಮ್ಮುಖದಲ್ಲಿ ಬುಧವಾರ ಸಂಜೆ ನೆರವೇರಿತು.
ಬುಧವಾರ ಬೆಳಗಿನ ಜಾವ ಬೆಳಗಾವಿ ಆಸ್ಪತ್ರೆಯಲ್ಲಿ ಕಾಕಾಸಾಹೇಬ ಪಾಟೀಲ ನಿಧನರಾದರು. ಮಧ್ಯಾಹ್ನ 12 ಗಂಟೆಗೆ ನಗರದ ಮುನ್ಸಿಪಲ್ ಪ್ರೌಢಶಾಲೆ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವರ ಪಾರ್ಥಿವ ಶರೀರ ಇಡಲಾಯಿತು. ಅಪಾರ ಸಂಖ್ಯೆಯ ಜನರು ಆಗಮಿಸಿ ದರ್ಶನ ಪಡೆದು ಕಂಬನಿ ಮಿಡಿದರು.
ಅಲ್ಲಿಂದ ಅಲಂಕಾರಗೊಂಡ ಲಾರಿಯಲ್ಲಿ ಹಳೆಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಸ್ಥಳೀಯ ಸಾಖರವಾಡಿಯಲ್ಲಿರುವ ಕಾಂಗ್ರೆಸ್ ಕಾರ್ಯಾಲಯದ ಎದುರು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಬಳಿಕ ನಗರದ ಬಸ್ ನಿಲ್ದಾಣ, ನಿಪ್ಪಾಣಿ-ಚಿಕ್ಕೋಡಿ ರಸ್ತೆ ಮೂಲಕ ಬಸವೇಶ್ವರ ವೃತ್ತದ ವರೆಗೆ ಮೆರವಣಿಗೆ ನಡೆಯಿತು. ಅಲ್ಲಿಂದ ಆಂಬುಲೆನ್ಸ್ ಮೂಲಕ ಚಿಕ್ಕೋಡಿ ತಾಲೂಕಿನ ಪಟ್ಟಣಕುಡಿ ಗ್ರಾಮಕ್ಕೆ ತಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಬಳಿಕ ಸ್ವಗ್ರಾಮ ವಾಳಕಿಯ ಮನೆಗೆ ತಂದು ವಿಧಿವತ್ತಾಗಿ ಪೂಜೆ ನೆರವೇರಿಸಿ ಮೆರವಣಿಗೆ ಮೂಲಕ ಪಾರ್ಥಿವ ಶರೀರವನ್ನು ರುದ್ರಭೂಮಿಗೆ ತಂದು ಅಂತ್ಯಕ್ರಿಯೆ ಮಾಡಲಾಯಿತು. ಪುತ್ರ ಸುಜಯ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ಸ್ಥಳೀಯ ವಿರೂಪಾಕ್ಷಲಿಂಗ ಸ್ವಾಮೀಜಿ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಶಾಸಕ ಗಣೇಶ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯ ಲಖನ ಜಾರಕಿಹೊಳಿ, ಮಾಜಿ ಸಚಿವ ವೀರಕುಮಾರ ಪಾಟೀಲ, ಮಾಜಿ ಸಂಸದ ರಮೇಶ ಕತ್ತಿ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಸುಭಾಷ ಜೋಶಿ, ಕೆಪಿಸಿಸಿ ಚಿಕ್ಕೋಡಿ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಚಂದ್ರಕಾಂತ ಕೊಠಿವಾಲೆ, ಯುವಧುರೀಣ ಉತ್ತಮ ಪಾಟೀಲ ಸೇರಿದಂತೆ ಅನೇಕರು ಕಾಕಾಸಾಹೇಬ ಅವರ ರಾಜಕಾರಣ ಹಾಗೂ ಒಡನಾಟದ ಕುರಿತು ಸ್ಮರಿಸಿದರು.
ಮಾಜಿ ಶಾಸಕ ಶಾಮ ಘಾಟಗೆ, ಯುವ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ರಾಹುಲ್ ಘಾಟಗೆ, ನಗರಸಭೆ ಅಧ್ಯಕ್ಷೆ ಸೋನಲ್ ಕೊಠಡಿಯಾ, ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲಗೊಂಡಾ ಪಾಟೀಲ ಸೇರಿ ಗಣ್ಯರು ಹಾಗೂ ಗ್ರಾಮಸ್ಥರು ಇದ್ದರು.
ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ ಇನ್ನಿಲ್ಲ ಅನಾರೋಗ್ಯದಿಂದ ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಿಪ್ಪಾಣಿ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕ ಕಾಕಾಸಾಹೇಬ ಪಾಂಡುರಂಗ ಪಾಟೀಲ (71) ಬುಧವಾರ ನಿಧನರಾದರು.
ಮೂರು ತಿಂಗಳ ಹಿಂದೆ ಕೊಲ್ಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ಕುತ್ತಿಗೆ ಮತ್ತು ಬೆನ್ನುಮೂಳೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ನ್ಯುಮೋನಿಯಾದಿಂದ ಅವರ ಆರೋಗ್ಯ ಹದಗೆಟ್ಟಿತ್ತು. ಇದರಿಂದ ಚಿಕಿತ್ಸೆಗಾಗಿ ಕಳೆದ ತಿಂಗಳು ಬೆಳಗಾವಿ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಬುಧವಾರ ಬೆಳಗಿನ ಜಾವ ಕೊನೆಯುಸಿರೆಳೆದರು.
ಸಾಮಾನ್ಯ ವ್ಯಕ್ತಿ ಹೇಗೆ ವಿಧಾನಸಭೆ ಸದಸ್ಯರಾಗಬಹುದು ಎಂಬುದಕ್ಕೆ ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ ಉದಾಹರಣೆ. ಸರ್ಕಾರದ ಯೋಜನೆಗಳನ್ನು ಸಾಮಾನ್ಯ ಜನರ ಮನೆ ಬಾಗಿಲಿಗೆ ತಲುಪಿಸಿದ್ದಾರೆ. ದೂಧಗಂಗಾ ನದಿ ನೀರು ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಈ ಭಾಗದಲ್ಲಿ ಹಸಿರು ಕ್ರಾಂತಿ ಮಾಡಿದ್ದಾರೆ. 1981ರಿಂದ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಅವರು ದಿ.ಎಂ.ಕೆ.ಕವಟಗಿಮಠ ಅವರೊಂದಿಗೆ ನಾಮನಿರ್ದೇಶಿತ ನಿರ್ದೇಶಕರಾಗಿ, ಜಿಲ್ಲಾ ಬ್ಯಾಂಕ್ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಹುಕ್ಕೇರಿ ತಾಲೂಕಿನ ಕನಂಗಳದ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಗೆದ್ದ ಅವರು ಮೂರು ಬಾರಿ ನಿಪ್ಪಾಣಿ ಶಾಸಕರಾಗಿ ಆಯ್ಕೆಯಾಗಿದ್ದರು. ಅವರ ಸಾವು ನೋವು ತಂದಿದೆ. ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ. ಅವರ ನೆನಪು ಜನರ ಮನಸ್ಸಿನಿಂದ ಎಂದೂ ಅಳಿಯುವುದಿಲ್ಲ. | ಮಹಾಂತೇಶ ಕವಟಗಿಮಠ ವಿಪ ಮಾಜಿ ಸದಸ್ಯ ಸರಳ, ಸಜ್ಜನ ರಾಜಕಾರಣಿಯಾಗಿದ್ದ ಕಾಕಾಸಾಹೇಬ ಪಾಟೀಲ ಮಾತಿಗಿಂತ ಕೃತಿ ಮೇಲು ಎಂದು ನಂಬಿ ನಡೆದವರು. ತಮ್ಮ ಅಧಿಕಾರವಧಿಯಲ್ಲಿ ನಿಪ್ಪಾಣಿ ಗಡಿಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಮೂಲಕ ಗಮನ ಸೆಳೆದವರು. ಅವರ ಅಗಲಿಕೆ ಸಮಾಜಕ್ಕೆ ದೊಡ್ಡ ಹಾನಿ ತಂದಿದೆ. ಮಾದರಿ ವ್ಯಕ್ತಿತ್ವದ ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಅವರ ಕುಟುಂಬ ಸದಸ್ಯರಿಗೆ ಅಗಲಿಕೆಯ ನೋವು ಭರಿಸುವ ಶಕ್ತಿ ಸಿಗಲಿ. | ಡಾ.ಪ್ರಭಾಕರ ಕೋರೆ ಕಾರ್ಯಾಧ್ಯಕ್ಷರು, ಕೆಎಲ್ಇ ಸಂಸ್ಥೆ