ಅಪಾಯಕ್ಕೆ ಆಹ್ವಾನ ನೀಡುತ್ತಿದೆ ರಾಷ್ಟ್ರೀಯ ಹೆದ್ದಾರಿ

-8-KGL-2,,
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 36;
Published on

ಕೊಳ್ಳೇಗಾಲ: ಕೊಳ್ಳೇಗಾಲ ಪಟ್ಟಣದೊಳಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ (209) ರಸ್ತೆ ಬದಿಗಳಿಗೆ ಅಳವಡಿಸಿರುವ ಇಂಟರ್‌ಲಾಕ್ ಟೈಲ್ಸ್ ಕಾಮಗಾರಿ ಅರ್ಧಕ್ಕೆ ನಿಂತ ಪರಿಣಾಮ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ.

ಏಳೆಂಟು ವರ್ಷದ ಹಿಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮುಡಿಗುಂಡದಿಂದ ಹೊಸ ಅಣಗಳ್ಳಿವರೆಗೆ 34 ಕೋಟಿ ರೂ. ವೆಚ್ಚದಲ್ಲಿ 7 ಕಿ.ಮೀ ಚತುಷ್ಪಥ ರಸ್ತೆ ವಿಸ್ತರಣೆ ಮಾಡಿತ್ತು. ಆದರೆ, ರಸ್ತೆಯ ಬದಿಯಲ್ಲಿ ನಡೆಸಬೇಕಿದ್ದ ಇಂಟರ್‌ಲಾಕ್ ಟೈಲ್ಸ್ ಕಾಮಗಾರಿ ಅರ್ಧಂಬರ್ಧ ಉಳಿದುಕೊಂಡಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಬ್ರದರನ್ ಚರ್ಚ್ ವೃತ್ತದಿಂದ (ಎಂಜಿಎಸ್‌ವಿ ಕಾಲೇಜು ಕಡೆಗೆ) ಸೆಸ್ಕ್ ಉಪವಿಭಾಗ ಕಚೇರಿ ರಸ್ತೆಯವರೆಗೆ ಇಂಟರ್‌ಲಾಕ್ ಟೈಲ್ಸ್ ಅಳವಡಿಕೆ ಆಗಿಲ್ಲ. ಅಂತೆಯೇ, ದೀಪಾ ವೈನ್ಸ್ ಸಮೀಪದಿಂದ ಪ್ರಸಾದ್ ಡಯಾಗ್ನೋಸ್ಟಿಕ್‌ವರೆಗೆ, ಬಜಾಜ್ ಶೋ ರೂಂವರೆಗಿನಿಂದ ಇಂದಿರಾ ಕ್ಯಾಂಟಿನ್‌ವರೆಗೆ, ಅಂಬೇಡ್ಕರ್ ವೃತ್ತದಿಂದ ಬೆಂಗಳೂರು ರಸ್ತೆ ಕಡೆಗೆ ತೆರಳುವ ಅಣಗಳ್ಳಿ ಬಡಾವಣೆವರೆಗೆ, ಅಚ್ಗಾಳ್ ಯಾತ್ರಿ ನಿವಾಸ್ ಹಿಂಭಾಗ ಆಟೋ ನಿಲ್ದಾಣದಿಂದ ಮುಡಿಗುಂಡ ಬಡಾವಣೆವರೆಗೂ ಎರಡು ಬದಿಯಲ್ಲೂ ಕಾಮಗಾರಿ ನನೆಗುದಿಗೆ ಬಿದ್ದಿದೆ. ಪರಿಣಾಮ ಅಲ್ಲಲ್ಲಿ ರಸ್ತೆಯ ಬದಿಯಲ್ಲಿ ಕೊರಕಲು ಉಂಟಾಗಿ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ರಸ್ತೆಯಲ್ಲಿ ಸಂಚಾರ ಮಾಡುವ ವಾಹನಗಳು ಆಯತಪ್ಪಿ ರಸ್ತೆಯ ಬದಿಗೆ ಬಂದರೂ ಅಪಘಾತಕ್ಕೆ ಸಿಲುಕುತ್ತವೆ. ಬೈಕ್, ಆಟೋ ಸವಾರರು ಜಾಗರೂಕತೆ ವಹಿಸದಿದ್ದರೆ ಬಿದ್ದು ಗಾಯಗೊಳ್ಳುವ ಪರಿಸ್ಥಿತಿ ಇದೆ. ದ್ವಿಚಕ್ರ ವಾಹನ ಸವಾರರು ಈಗಾಗಲೇ ಬಿದ್ದು ಪೆಟ್ಟು ಮಾಡಿಕೊಂಡ ಸಾಕಷ್ಟು ಉದಾಹರಣೆಯಿದೆ.

ಮಳೆ ಬಿದ್ದು ಗುಂಡಿ

ತಾಲೂಕು ಪಂಚಾಯಿತಿ ವೃತ್ತದಿಂದ ಶಾಂತಿ ಚಿತ್ರಮಂದಿರದವರೆಗೆ ಇಳಿಜಾರಿದ್ದು, ಇದರಿಂದ ಮಳೆ ನೀರು ಹರಿದು ರಸ್ತೆಯ ಬದಿಯಲ್ಲಿ ಗುಂಡಿ ಬಿದ್ದಿದೆ. ಈ ಸ್ಥಳ ಟೌನ್‌ನ ಮಧ್ಯದಲ್ಲಿರುವುದರಿಂದ ಸಂಚಾರ ಹೆಚ್ಚಿರುತ್ತದೆ. ಬೈಕ್ ಸವಾರರು ಹೆದ್ದಾರಿ ರಸ್ತೆಯಲ್ಲಿರುವ ಈ ಅವ್ಯವಸ್ಥೆಯನ್ನು ಕಂಡು ಜನಪ್ರತಿನಿಧಿಗಳಿಗೆ ಹಾಗೂ ಸ್ಥಳೀಯ ನಗರಸಭೆಯ ಆಡಳಿತಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.

ನಗರೋತ್ಥನ ಹಂತ-4 ರಲ್ಲಿ ಕಾಮಗಾರಿ: ಕಳೆದ 4 ತಿಂಗಳ ಹಿಂದಷ್ಟೆ ಹೆದ್ದಾರಿ ರಸ್ತೆಯಲ್ಲಿ ಸಿಗುವ ಅಚ್ಗಾಳ್ ಯಾತ್ರಿ ನಿವಾಸ್ ಬಳಿಯಿಂದ ಬಸ್ ನಿಲ್ದಾಣದವರೆಗೆ ನಗರೋತ್ಥನ ಹಂತ-4 ರಲ್ಲಿ 55 ಲಕ್ಷ ರೂ. ವೆಚ್ಚದಲ್ಲಿ ಇಂಟರ್‌ಲಾಕ್ ಟೈಲ್ಸ್ ಅಳವಡಿಕೆ ಕಾಮಗಾರಿ ನಡೆಸಲಾಗಿದೆ. ಇದರಿಂದ ರಸ್ತೆ ಬದಿಯಲ್ಲಿ ನಿರ್ಮಾಣವಾಗಿದ್ದ ಗುಂಡಿಗಳಿಂದ ಅಪಾಯವನ್ನು ತಪ್ಪಿಸಿದಂತಾಗಿದೆ. ಹಾಗಾಗಿ ಸಾರ್ವಜನಿಕರು ಎಂಜಿಎಸ್‌ವಿ ಕಾಲೇಜು ಮುಂಭಾಗದ ಬದಿಯಲ್ಲಿ ಸೇರಿದಂತೆ ಇನ್ನಿತರ ಕಡೆ ಉಳಿದಿರುವ ಇಂಟರ್‌ಲಾಕ್ ಟೈಲ್ಸ್ ಅಳವಡಿಕೆ ಕಾಮಗಾರಿಯನ್ನು ಶೀಘ್ರದಲ್ಲೇ ಮಾಡಿಸಲಿ ಎಂದು ನಗರಸಭೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಒತ್ತಾಯಿಸಿದ್ದಾರೆ.

ಹೆದ್ದಾರಿ ಬದಿಯಲ್ಲಿ ಕೊರಕಲು ಉಂಟಾಗಿ ರಸ್ತೆ ಸಂಚಾರಕ್ಕೆ ತೊಂದರೆಯಾಗಿರುವುದು ಗಮನದಲ್ಲಿದೆ. ಈ ಬಗ್ಗೆ ಶಾಸಕರ ಜತೆ ಚರ್ಚಿಸಿ ಶೀಘ್ರದಲ್ಲೇ ಅಗತ್ಯವಿರುವ ಕಡೆ ಇಂಟರ್‌ಲಾಕ್ ಟೈಲ್ಸ್ ಅಳವಡಿಕೆ ಕಾಮಗಾರಿ ನಡೆಸಲು ನಗರಸಭೆಯಿಂದ ಕ್ರಮವಹಿಸಲಾಗುತ್ತದೆ. ಎ.ಪಿ.ಶಂಕರ್, ಉಪಾಧ್ಯಕ್ಷ, ನಗರಸಭೆ ಕೊಳ್ಳೇಗಾಲ ಶಾಸಕರ ಅನುದಾನದಲ್ಲಿ ಸುಮಾರು 10 ಲಕ್ಷ ಹಣವನ್ನು ಅಂಬೇಡ್ಕರ್ ಪ್ರತಿಮೆ ವೃತ್ತದ ಆವರಣದಿಂದ ಎಡಭಾಗಕ್ಕೆ ಉಚ್ಚಾಲಮ್ಮನ ದೇವಾಲಯದವರೆಗೆ ಇಂಟರ್ ಲಾಕ್ ಟೈಲ್ಸ್ ಅಳವಡಿಕೆ ಕಾಮಗಾರಿ ನೀಡಲಾಗಿದೆ. ಕಾಮಗಾರಿ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ. ಎಂಜಿ ಎಸ್‌ವಿ ಕಾಲೇಜು ಮುಂಭಾಗ ಟೈಲ್ಸ್ ಅಳವಡಿಕೆ ಕಾಮಗಾರಿ ನಡೆಸಲು ಶಾಸಕರ ಗಮನ ಸೆಳೆಯಲಾಗುವುದು. ನಾಗೇಂದ್ರ, ಇಂಜಿನಿಯರ್, ನಗರಸಭೆ, ಕೊಳ್ಳೇಗಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net