

ಹುಕ್ಕೇರಿ: ಹುಕ್ಕೇರಿ-ಮದಮಕ್ಕನಾಳ ರಸ್ತೆ ಬದಿಯ ಬಾವಿಗಳಿಗೆ ತಡೆ ಗೋಡೆ ನಿರ್ಮಿಸಲಾಗುತ್ತಿದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ಪಟ್ಟಣದ ಹೊರವಲಯದಲ್ಲಿ ೪೦ ಲಕ್ಷ ರೂ. ವೆಚ್ಚದ ನಾಲ್ಕು ತಡೆಗೋಡೆಗಳ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಈಚೆಗೆ ಹುಕ್ಕೇರಿ-ಮದಮಕ್ಕನಾಳ ಮತ್ತು ಯರನಾಳ ಸಂಪರ್ಕ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ಕಿರಿದಾದ ರಸ್ತೆಯ ಪಕ್ಕದಲ್ಲೆ ಬಾವಿ ಇರುವುದರಿಂದ ವಾಹನ ಸವಾರರು ಅಪಾಯದಲ್ಲಿ ಸಂಚರಿಸುವಂತಾಗಿದೆ. ಆದ್ದರಿಂದ ತಡಗೋಡೆ ನಿರ್ಮಿಸಲಾಗುತ್ತಿದೆ. ರಸ್ತೆ ಅಕ್ಕಪಕ್ಕದ ರೈತರು ಸಮ್ಮತಿಸಿದಲ್ಲಿ ರಸ್ತೆ ಅಗಲೀಕರಣ ಮಾಡಲು ಪ್ರಯತ್ನಿಸುತ್ತೇನೆ ಎಂದರು.
ಲೋಕೋಪಯೋಗಿ ಮತ್ತು ಜಿಪಂ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಅವುಗಳಿಗೆ ಸಂರಕ್ಷಣಾ ಗೋಡೆ ನಿರ್ಮಾಣದ ಕ್ರಿಯಾಯೋಜನೆ ತಯಾರಿಸಬೇಕು. ವಿದ್ಯುತ್ ಸಹಕಾರಿ ಸಂಘದ ಕಾರ್ಯವ್ಯಾಪ್ತಿಯಲ್ಲಿ ಬರುವ ಜಿಪಂ ವ್ಯಾಪ್ತಿ ಪ್ರಮುಖರ ಮತ್ತು ಮತದಾರರ ಅಭಿಪ್ರಾಯ ಪಡೆದು ಜನಮತದ ಅಭ್ಯರ್ಥಿಗಳನ್ನು ಸ್ಪಂದಿಸುವಂತೆ ನೋಡಿಕೊಳ್ಳುತ್ತೇವೆ. ಆಡಳಿತ ಮಂಡಳಿಯ ಕೆಲವರು ನಮ್ಮನ್ನು ಬಿಟ್ಟು ಹೋಗುವ ಮೂಲಕ ವಿಶ್ವಾಸದ ಪಾಠ ಕಲಿಸಿದ್ದಾರೆ. ೪೦ ವರ್ಷಗಳ ರಾಜಕಾರಣಿಗಳ ಅನುಭವ ಕೇವಲ ಎರಡು ವರ್ಷಗಳಲ್ಲಿ ನನಗೆ ಬಂದಿದೆ ಎಂದು ಹೇಳಿದರು.
ಅರ್ಬನ್ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ಎ.ಕೆ.ಪಾಟೀಲ, ಆನಂದ ಗಂಧ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಗುರುರಾಜ ಕುಲಕರ್ಣಿ, ಅಶೋಕ ಅಂಕಲಗಿ, ತಮ್ಮಣ್ಣ ಕರಗುಪ್ಪಿ, ಆನಂದ ಲಕ್ಕುಂಡಿ, ಮಲ್ಲಪ್ಪ ಬಿಸಿರೊಟ್ಟಿ ಇತರರಿದ್ದರು.