ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಸುವರ್ಣಾವತಿ

15 yelandur 04
ತಾಲೂಕಿನ ಕೆಸ್ತೂರು ಕೆರೆಯ ಕೋಡಿ ಬಿದ್ದ ಪರಿಣಾಮ ಜಲಾವೃಗೊಂಡಿರುವ ಮನೆಗಳು.
Published on

ಯಳಂದೂರು: ತಾಲೂಕಿನ ಸುವರ್ಣಾತಿ ಹೊಳೆ ಕಳೆದ ಎರಡು ದಿನಗಳಿಂದ ಸುರಿದ ಮಳೆಯಿಂದ ಮತ್ತೆ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹದ ಭೀತಿ ಶುರುವಾಗಿದೆ. ಜತೆಗೆ ಸೇತುವೆಗಳು ಮುಳುಗಡೆಯಾಗಿ ಸಂಚಾರ ಸ್ಥಗಿತಗೊಂಡಿದೆ. ಕೆಸ್ತೂರು ಕೆರೆ ಕೋಡಿ ಬಿದ್ದ ಪರಿಣಾಮ 70ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.
ತಾಲೂಕಿನಾದ್ಯಂತ ಶುಕ್ರವಾರ ಧಾರಾಕಾರ ಮಳೆ ಸುರಿದು ಜನಜೀವನ ಅಸ್ತವ್ಯಸ್ತವಾಗಿತ್ತು. ವಿವಿಧ ಗ್ರಾಮಗಳ ತಗ್ಗು ಪ್ರದೇಶಗಳಿಗೆ ನೀರು ತುಂಬಿ ಜನರು ಪರದಾಡಿದರು.

ಬಳೆ, ಯರಿಯೂರು, ಕೆಸ್ತೂರು, ಕಂದಹಳ್ಳಿ, ದುಗ್ಗಹಟ್ಟಿ, ವೈ.ಕೆ.ಮೋಳೆ, ಗುಂಬಳ್ಳಿ, ಯರಗಂಬಳ್ಳಿ, ಗೌಡಹಳ್ಳಿ, ಮದ್ದೂರು ಸೇರಿದಂತೆ ಪಟ್ಟಣ ಬಳೇಪೇಟೆ ಮೊತ್ತದಕೇರಿ ಬಡಾವಣೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತು.

ಜಿಲ್ಲೆಯ ಏಕೈಕ ನದಿಯಾಗಿರುವ ಸುವರ್ಣಾವತಿ ಕಳೆದ ಎರಡು ದಿನಗಳಿಂದ ತುಂಬಿ ಹರಿಯುತ್ತಿದೆ. ಪಟ್ಟಣವನ್ನು ಇಬ್ಭಾಗ ಮಾಡುವ ಈ ನದಿಯು ಜೋರು ಮಳೆಯಿಂದ ತುಂಬಿದ್ದು, ತಾತ್ಕಾಲಿಕವಾಗಿ ನಿರ್ಮಿಸಿದ್ದ ಸೇತುವೆ ಮುಳುಗಿದೆ. ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ಮದ್ದೂರು ಗ್ರಾಮದಲ್ಲಿ ನದಿಯ ದಡದಲ್ಲೇ ಇರುವ ಐತಿಹಾಸಿಕ ಹಜರತ್ ದಿಲ್‌ಬರ್ ಷಾ ವಲಿ ದರ್ಗಾ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ರಾಷ್ಟ್ರೀಯ ಹೆದ್ದಾರಿ-209ರ ರಸ್ತೆಯ ಬದಿಯಲ್ಲೇ ನೀರು ಹರಿಯುತ್ತಿದೆ. ಕಟ್ಟೆಗಣಿಗನೂರು ಗ್ರಾಮದಲ್ಲಿ ನದಿಯಿಂದ ಸುತ್ತುವರಿದಿರುವ ಐತಿಹಾಸಿಕ ನೀಲಕಂಠೇಶ್ವರ ದೇಗುಲಕ್ಕೆ ತೆರಳಲು ಕಷ್ಟವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net