

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಅಪಹರಣವಾಗಿದ್ದ ದಂಪತಿ ಮತ್ತು ಮಗುವನ್ನು ಮಾಹಿತಿ ತಿಳಿದ 24 ಗಂಟೆಯೊಳಗೆ ರಕ್ಷಣೆ ಮಾಡಿರುವ ಪೊಲೀಸರು, ಏಳು ಜನ ಆರೋಪಿಗಳಲ್ಲಿ ನಾಲ್ವರ ಹೆಡೆಮುರಿ ಕಟ್ಟಿದ್ದಾರೆ.
ಬಂಡೀಪುರದ ಕಂಟ್ರಿ ಕ್ಲಬ್ ರೆಸಾರ್ಟ್ ರಸ್ತೆಯಲ್ಲಿ ಅಪಹರಣಕ್ಕೊಳಗಾಗಿದ್ದ ಮೂಲತಃ ದಾವರಣಗೆರೆ ಚನ್ನಗಿರಿ ನಿವಾಸಿ, ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿರುವ ಸಿ.ಜೆ.ನಿಶಾಂತ್, ಪತ್ನಿ ಪಿ.ವಿ.ಚಂದನಾ ಮತ್ತು 7 ವರ್ಷದ ಗಂಡು ಮಗುವನ್ನು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹೊನ್ನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ರಕ್ಷಣೆ ಮಾಡಿದ್ದಾರೆ. ಆರೋಪಿಗಳಾದ ವಿಜಯಪುರದ ಮಲ್ಲಿಕಾರ್ಜುನ(30), ವಿಶ್ವನಾಥ(30), ಯಾದಗಿರಿಯ ಈರಣ್ಣ(32), ಸಿದ್ದರಾಮಯ್ಯನನ್ನು(40) ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಪುನೀತ್, ಈತನ ಸಹೋದರ ಸ್ನೇಹಿತ್, ಭೀಮನಗೌಡನನ್ನು ಸೆರೆ ಹಿಡಿಯಲು ಪೊಲೀಸರು ಬಲೆಬೀಸಿದ್ದಾರೆ. ಬಂಡೀಪುರದಲ್ಲಿ ಸೋಮವಾರ ಬೆಳಗ್ಗೆ 10.15ರಲ್ಲಿ ನಡೆದ ಅಪಹರಣದ ಮಾಹಿತಿಯನ್ನು ಮಧ್ಯಾಹ್ನ ತಿಳಿದ ಪೊಲೀಸರು ವಿಜಯಪುರಕ್ಕೆ ಹೋಗಿ ಮಂಗಳವಾರ ಬೆಳಗ್ಗೆಯೊಳಗೆ ಭೇದಿಸಿದ್ದಾರೆ.
ಅಪಹರಣಕ್ಕೆ ಕಾರಣವೇನು?
ನಗರದ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿ ಆಯೋಜಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಪ್ರಕರಣದ ಸಂಪೂರ್ಣ ಮಾಹಿತಿ ನೀಡಿದರು. ತಲೆಮರೆಸಿಕೊಂಡಿರುವ ಆರೋಪಿ ಪುನೀತ್ ಬಳಿ ಸಿ.ಜೆ.ನಿಶಾಂತ್ ಹಣ ಪಡೆದುಕೊಂಡಿದ್ದ. ಇದನ್ನು ವಾಪಸ್ ಕೊಟ್ಟಿರಲಿಲ್ಲ. ಅಪಹರಣಕ್ಕೆ ಹಣಕಾಸು ವ್ಯವಹಾರವೇ ಕಾರಣ ಎಂದು ತಿಳಿಸಿದರು.
ಹಣ ಪಡೆದಿದ್ದ ಜಿ.ಜೆ.ನಿಶಾಂತ್ ಮೇಲೆ ಪುನೀತ್ ಕಣ್ಣಿಟ್ಟಿದ್ದ. ಇದೇ ಸಂದರ್ಭದಲ್ಲಿ ಸಿ.ಜೆ.ನಿಶಾಂತ್ ಮಾ.1ರಿಂದ 4ವರೆಗೆ ಬಂಡೀಪುರದ ಕಂಟ್ರಿ ಕ್ಲಬ್‌ನಲ್ಲಿ ರೂಂ ಬುಕ್ ಮಾಡಿದ್ದ. ಅದರಂತೆ ಮಾ.1ರಂದು ಸಿ.ಜೆ.ನಿಶಾಂತ್, ಪತ್ನಿ ಪಿ.ವಿ.ಚಂದನಾ ಮತ್ತು 7 ವರ್ಷದ ಗಂಡು ಮಗುವಿನೊಂದಿಗೆ ರೆಸಾರ್ಟ್‌ಗೆ ಆಗಮಿಸಿದ. ಮಾ.3ರಂದು ಮಗುವಿನ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತೋರಿಸಲು ಬೆಳಗ್ಗೆ ರೆಸಾರ್ಟ್‌ನಿಂದ ಕಾರಿನಲ್ಲಿ ಹೊರಗೆ ಹೊರಟಾಗ ಎರಡು ಕಾರಿನಲ್ಲಿ ಬಂದ ಆರೋಪಿಗಳು ದಂಪತಿ ಮತ್ತು ಮಗುವನ್ನು ಅಪಹರಣ ಮಾಡಿದ್ದಾರೆ. ಸಿ.ಜೆ.ನಿಶಾಂತ್ ಕಾರನ್ನೂ ಜೊತೆಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಆರೋಪಿ ಮಲ್ಲಿಕಾರ್ಜುನ ರೆಸಾರ್ಟ್‌ಗೆ ಕಾರಿನಲ್ಲಿ ಆಗಮಿಸಿ ರೂಂ ಕೇಳುವ ನೆಪದಲ್ಲಿ ಸಿ.ಜೆ.ನಿಶಾಂತ್ ಚಲನವಲನ ಗಮನಿಸಿ ಹೋಗಿದ್ದ. ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಕಾರಿನ ನಂಬರ್ ಆಧರಿಸಿ ತನಿಖೆ ಕೈಗೊಂಡಾಗ ಸಿಕ್ಕ ಮಾಹಿತಿ ಆಧರಿಸಿ ವಿಜಯಪುರ ಜಿಲ್ಲೆಗೆ ಹೋಗಿ ತೋಟದ ಮನೆಯಲ್ಲಿ ಬಚ್ಚಿಟ್ಟಿದ್ದ ಸಿ.ಜೆ.ನಿಶಾಂತ್, ಪತ್ನಿ ಪಿ.ವಿ.ಚಂದನಾ ಮತ್ತು ಮಗುವನ್ನು ರಕ್ಷಣೆ ಮಾಡಲಾಯಿತು. ನಾಲ್ವರು ಆರೋಪಿಗಳನ್ನು ಬಂಧಿಸಲಾಯಿತು. ತಲೆಮರೆಸಿಕೊಂಡಿರುವವರ ಶೋಧ ನಡೆಯುತ್ತಿದೆ. ಅಪಹರಣ ಪ್ರಕರಣದ ತನಿಖೆಯಲ್ಲಿ ಭಾಗವಹಿಸಿದ ಪೊಲೀಸರು ಮತ್ತು ಸಿಬ್ಬಂದಿ, ತಾಂತ್ರಿಕ ವಿಭಾಗ, ಬೆರಳಚ್ಚು ವಿಭಾಗ ಮತ್ತು ನಿಸ್ತಂತು ವಿಭಾಗದವರಿಗೆ ಪ್ರಶಂಸೆ ವ್ಯಕ್ತಪಡಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ಶಶಿಧರ್, ಡಿವೈಎಸ್ಪಿ ಲಕ್ಷ್ಮಯ್ಯ ಇದ್ದರು.