

ಹಾಸನ: ತನ್ನ ಸುತ್ತಮುತ್ತ ನಡೆಯುತ್ತಿರುವ ಅಪಸವ್ಯಗಳನ್ನೆಲ್ಲಾ ನೋಡಿ ರೂಪ ಹಾಸನ ಅವರಿಗೆ ಸುಮ್ಮನೆ ಕೂರಲಾಗುತ್ತಿಲ್ಲ. ಅವರೊಳಗೆ ಇರುವ ಸಾಮಾಜಿಕ ಹೋರಾಟಗಾರ್ತಿ ಅದಕ್ಕೆ ಪ್ರತಿಭಟಿಸುತ್ತೆ ಮತ್ತು ಪರಿಹಾರಕ್ಕೆ ಹಾತೊರೆಯುತ್ತೆ. ಅದೇ ಸಂದರ್ಭದಲ್ಲಿ ಅವರೊಳಗಿನ ಕವಯತ್ರಿ ಆ ಅಪಸವ್ಯಗಳಿಗೆ ಅಕ್ಷರರೂಪ ನೀಡುತ್ತದೆ. ಅದರ ಫಲಶೃತಿಯೇ ‘ಇವಳ ಭಾರತ’ ಎಂದು ನಾಡಿನ ಸುಪ್ರಸಿದ್ಧ ಕವಯತ್ರಿ ಸ.ಉಷಾ ಹೇಳಿದರು.
ಸಮತಾ-ಬಿಜಿವಿಎಸ್, ಯಶಸ್ವಿನಿ ಮಹಿಳಾ ಶ್ರೇಯೋಭಿವೃದ್ಧಿ ಸೇವಾ ಸಂಸ್ಥೆ ಹಾಗೂ ಪಲ್ಲವ ಪ್ರಕಾಶನ ಸಂಯುಕ್ತಾಶ್ರಯದಲ್ಲಿ ನಗರದ ಸಂಸ್ಕೃತ ಭವನದಲ್ಲಿ ಭಾನುವಾರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಕವಯತ್ರಿ ರೂಪ ಹಾಸನ ಅವರ ಹೆಣ್ಣೊಡಲ ಹಾಡು-ಪಾಡಿನ ಲೇಖನಗಳ ಗುಚ್ಛ ‘ಇವಳ ಭಾರತ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ರೂಪ ಹಾಸನ ಅವರಿಗೆ ಕ್ರಾಂತಿಕಾರಿ ಮನಸಿನ ಕುಟುಂಬ ಹಾಗೂ ಸ್ನೇಹಿತವರ್ಗ ಸುತ್ತಲೂ ಇರುವುದರಿಂದ ಅವರ ಆಲೋಚನೆ ದಮನಿತ ಜನರ ಪರವಾಗಿ, ಅವರ ಬದುಕಿನ ಸುಧಾರಣೆಗಾಗಿ ತುಡಿಯುತ್ತದೆ. ಅವರ ಬರಹಗಳೆಲ್ಲವೂ ಈ ನೆಲೆಯಲ್ಲೆ ಹುಟ್ಟಿಕೊಂಡಿವೆ. ಮತ್ತದು ಪರಿಣಾಮಕಾರಿಯಾಗಿ ಮಾತನಾಡುತ್ತದೆ. ರೂಪ ಅವರ ಬರಹ ಎಲ್ಲರಲ್ಲೂ ಶಾಂತಿ, ಸಹನೆ, ಪ್ರೀತಿಯ ಭಾಷೆಯಲ್ಲೇ ಮಾತನಾಡುತ್ತದೆ ಎಂದರು.
ಪುಸ್ತಕ ಪರಿಚಯ ಮಾಡಿದ ಬಿಜಿವಿಎಸ್ ಜಿಲ್ಲಾ ಕಾರ್ಯದರ್ಶಿ ಅಹಮದ್ ಹಗರೆ ಮಾತನಾಡಿ ಒಂದು ಪುಸ್ತಕ ಓದುಗನೊಳಗೆ ವಿಚಾರದ ಕಂಪನ ಮೂಡಿಸಬೇಕು, ಸಾಹಿತ್ಯದ ಲಾಲಿತ್ಯ ಹಾಡಬೇಕು, ತನ್ನನ್ನು ತಾನು ಪ್ರಶ್ನಿಸಿಕೊಳ್ಳುವಂತೆ ಮಾಡಬೇಕು, ಓದುತ್ತಿದ್ದರೆ ಮುದ ನೀಡಿದ ಅನುಭವ ಕಟ್ಟಿಕೊಡಬೇಕು. ಒಟ್ಟಿನಲ್ಲಿ ಅದು ಕಾಡಬೇಕು. ಇಲ್ಲ ಮುದನೀಡಬೇಕು. ಆಗ ಪುಸ್ತಕ ಗೆದ್ದಿದೆ, ಜನಮಾನಸದೊಳಕ್ಕಿಳಿದಿದೆ ಎಂದು ಭಾವಿಸಬಹುದು. ಈ ದಿಸೆಯಲ್ಲಿ ರೂಪರ ಈ ಪುಸ್ತಕ 2 ದಿನ ಸತತವಾಗಿ ತಳಮಳ ಎಬ್ಬಿಸಿತು. ಈ ನೆಲದ ಹೆಣ್ಣುಗಳು ಬಹುಮುಖಿ ನೆಲೆಯಲ್ಲಿ ಅನುಭವಿಸುತ್ತಿರುವ ಯಾತನೆ, ನನ್ನೊಳಗೂ ತಲ್ಲಣಿಸಿತು ಎಂದು ವಿವರಿಸಿದ ಅವರು, ಪುಸ್ತಕದೊಳಗೆಲ್ಲ ಅಲ್ಲಲ್ಲಿ ತುರುಕಿರುವ ಹೆಣ್ಣುಮಕ್ಕಳ ಮೌನ ಪ್ರತಿರೋಧ ಬೆರಗುಗೊಳಿಸಿತು. ಭಾಷೆಯ ಬಳಕೆ, ಸಾಲುಗಳ ರಚನೆ ಭಾವತರಂಗ ಉಕ್ಕಿಸಿತು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪುಸ್ತಕದ ಕತೃ ಹಾಗೂ ಲೇಖಕಿ ರೂಪ ಹಾಸನ, ಕೃತಿ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿರುವ ಎಲ್ಲ ದಮನಿತ ಹೆಣ್ಣು ಜೀವಗಳಿಗೆ ಸ್ವಾತಂತ್ರೃದ ಬೆಳಕು ಮೂಡಲೆಂಬ ಆಶಯದೊಂದಿಗೆ ಈ ಪುಸ್ತಕವನ್ನು ಅರ್ಪಿಸುತ್ತಿದ್ದೇನೆ. ಇದು ಸಾಧ್ಯವಾಗಿದ್ದು ನನ್ನ ಕುಟುಂಬದ ಸಾಮೂಹಿಕ ಬೆಂಬಲದಿಂದ. ಸಮತಾ-ಬಿಜಿವಿಎಸ್ ಮಹಿಳಾ ದಿನದ ನೆನಪಲ್ಲೆ ಪುಸ್ತಕ ಬಿಡುಗಡೆ ಮಾಡಲು ಆಶಿಸಿ ಬಿಡುಗಡೆಗೊಳಿಸುತ್ತಿರುವುದು ಸಂತಸದಾಯಕ ಎಂದು ಹೇಳಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಸಮತಾ ಸಂಚಾಲಕಿ ಮಮತಾ ಶಿವು, ಹಾಸನ ತಾಲ್ಲೂಕು ಬಿಜಿವಿಎಸ್ ಗೌರವಾಧ್ಯಕ್ಷೆ ಹಾಗೂ ವಿಜಯ ಶಾಲೆಯ ಆಡಳಿತಾಧಿಕಾರಿ ತಾರಾಸ್ವಾಮಿ, ಪಲ್ಲವ ಪ್ರಕಾಶನದ ವೆಂಕಟೇಶ್, ಯಶಸ್ವಿನಿ ಸಂಸ್ಥೆಯ ಧರಣಿ ಉಪಸ್ಥಿತರಿದ್ದರು.