

ಬೆಳಗಾವಿ: ಸೈಬರ್ ವಂಚನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲಿವೆ. ಲಿಂಕ್, ಓಟಿಪಿ, ಬ್ಯಾಂಕ್ ವಿವರಗಳನ್ನು ಯಾರಿಗೂ ಹಂಚಬಾರದು. ಅನುಮಾನಾಸ್ಪದ ಕರೆ ಮತ್ತು ಸಂದೇಶ ಬಂದರೆ 1930 ಕ್ಕೆ ಕರೆಮಾಡಿ ಪರಿಹರಿಸಿಕೊಳ್ಳಬೇಕು ಎಂದು ರಾಜ್ಯ ಸೈಬರ್ ಸೆಕ್ಯೂರಿಟಿ ಫೌಂಡೇಷನ್ ಸಂಯೋಜಕ ರಾಕೇಶ ಕಾವೇರಿ ಸಲಹೆ ನೀಡಿದರು.
ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ದಲ್ಲಿರುವ ಮಹಿಳಾ ಕಲ್ಯಾಣ ಸಂಸ್ಥೆಯ ಶಕ್ತಿ ಸದನ ಕೇಂದ್ರದಲ್ಲಿ ಈಚೆಗೆ ಏರ್ಪಡಿಸಿದ್ದ ಎಂಎಸ್‌ಎಂಇ ಸೈಬರ್ ಸೆಕ್ಯೂರಿಟಿ ತರಬೇತಿ ಕಾರ್ಯಾಗಾ ರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು.
ಸುಗಂಧಾ ಅಲ್ಲಟ್ಟಿ ಮಾತನಾಡಿ, ಇನ್‌ಸ್ಟಾಗ್ರಾಂ, ಫೇಸ್ಬುಕ್ ಮತ್ತಿತರ ಸಾಮಾಜಿಕ ಜಾಲತಾಣಗಳ ಸಮರ್ಪಕ ಬಳಕೆ ಮಾಡದೆ ಯುವತಿಯರು ಪ್ರೇಮಪ್ರಕರಣಗಳ ಜಾಲಕ್ಕೆ ಸಿಲುಕಿ ಸಾಗಣೆ, ವೇಶ್ಯಾವಾಟಿಕೆ, ಬಾಲ್ಯವಿವಾಹದಂತಹ ಸಮಸ್ಯೆಗಳಿಗೆ ಬಲಿಪಶುವಾಗುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳ ಸರಿಯಾದ ಬಳಕೆಮಾಡಬೇಕು. ಅಪರಿಚಿತರೊಂದಿಗೆ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬಾರದು ಎಂದು ಹೇಳಿದರು. ಕೇಂದ್ರದ ಅಧೀಕ್ಷಕಿ ದಾಕ್ಷಾಯಣಿ ಮಠಪತಿ, ಮಂದಾಕಿನಿ ಹಟ್ಟಿ ಇತರರಿದ್ದರು.