

ವಿಜಯಪುರ: ಡಿಜೆ, ಕೆಜೆ ಹಳ್ಳಿ ಸೇರಿದಂತೆ ರಾಜ್ಯದ ವಿವಿಧೆಡೆ ನಡೆದ ಕೋಮು ಗಲಭೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಾಸಕ ತನ್ವೀರ್ ಶೇಠ ಬರೆದ ಪತ್ರವನ್ನು ಸಚಿವ ಎಂ.ಬಿ. ಪಾಟೀಲ ಸಮರ್ಥಿಕೊಂಡಿದ್ದಾರೆ.
ತನ್ವೀರ್ ಶೇಠ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವರಿಗೆ ಬರೆದ ಪತ್ರದ ಕುರಿತು ಬುಧವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದೊಂದು ನಿತ್ಯದ ಕ್ರಮ. ಈಗಾಗಲೇ ಗೃಹ ಸಚಿವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದರು.
ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ಆದರೆ, ನಿರಪರಾಧಿಗಳಿಗೆ ತೊಂದರೆಯಾಗಬಾರದು. ತನಿಖೆ ನಡೆದ ಬಳಿಕ ಯಾರು ಅಮಾಯಕರು, ಅಪರಾಧಿಗಳು ಎಂಬುದು ಗೊತ್ತಾಗುತ್ತದೆ. ಅಪರಾಧಿಗಳು ಯಾರೇ ಇದ್ದರೂ ಅವರಿಗೆ ಶಿಕ್ಷೆ ಆಗಲೇಬೇಕು. ಯಾವುದೇ ಪಕ್ಷ, ಜಾತಿ, ಧರ್ಮದವರಾಗಿದ್ದರೂ ಶಿಕ್ಷೆ ಆಗಲೇ ಬೇಕು. ಅದೇ ರೀತಿ ನಿರಪರಾಧಿಗಳಿದ್ದರೆ ಯಾವುದೇ ಪಕ್ಷ, ಜಾತಿ, ಧರ್ಮ ನೋಡದೇ ಅನ್ಯಾಯಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಗೃಹ ಸಚಿವರು ಕಾರ್ಯನಿರ್ವಹಿಸುತ್ತಿದ್ದಾರೆಂದರು.
ಇನ್ನು ಶಾಸಕ ಬಸನಗೌಡ ಪಾಟೀಲರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಖಡಕ್ ಆಗಿ ಉತ್ತರಿಸಿದ ಸಚಿವ ಎಂ.ಬಿ. ಪಾಟೀಲ, ಯತ್ನಾಳ ಹೇಳಿದ ಹಾಗೆ ನಮ್ಮ ಸರ್ಕಾರ ನಡೆಯುವುದಿಲ್ಲ. ಅವರು ಹೇಳಿದಂತೆ ನಡೆಯಬೇಕೆಂದೇನೂ ಇಲ್ಲ. ಯಾರು ಅಪರಾಧಿಗಳೋ ಅವರಿಗೆ ಶಿಕ್ಷೆ ಆಗುತ್ತದೆ. ನಿರಪರಾಧಿಗಳಿಗೆ ಅನ್ಯಾಯವಾಗಲ್ಲ ಎಂದರು.
ಪೊಲೀಸ್‌ರ ನೈತಿಕತೆ ಬಗ್ಗೆ ಮಾತನಾಡುವ ಬಿಜೆಪಿಯ ಈ ಹಿಂದಿನ ಗೃಹ ಸಚಿವರು ಪೊಲೀಸ್‌ರನ್ನು ನಾಯಿಗಳು ಎಂದಿದ್ದರು. ಒಬ್ಬ ಪೊಲೀಸ್ ತಪ್ಪು ಮಾಡಿದ್ದಕ್ಕೆ ಎಲ್ಲ ಪೊಲೀಸ್‌ರನ್ನು ನಿಂದಿಸಿದ್ದರು. ನಾನು ಕೂಡ ಗೃಹ ಸಚಿವನಾಗಿದ್ದವನು. ಪೊಲೀಸ್‌ರಿಗಾಗಿ ಔರಾದಕರ್ ವರದಿ ಜಾರಿಗೆ ಪ್ರಯತ್ನಿಸಿದ್ದೆ. ಈಗಲೂ ಅದಕ್ಕೆ ಬದ್ಧವಾಗಿದ್ದೇನೆ. ಪೊಲೀಸ್‌ರ ಬಗ್ಗೆ ನಮಗೆ ಅಪಾರ ಗೌರವವಿದೆ ಎಂದರು.