

ರಾಯಲ್ಪಾಡು : ಕಳವು, ಗಾಂಜಾ ಮೊದಲಾದ ಮಾದಕ ದ್ರವ್ಯಗಳ ಸೇವನೆ, -ಮಾರಾಟ ಸೇರಿ ಇತರ ಅಪರಾಧ ಪ್ರಕರಣಗಳ ಬಗ್ಗೆ ಇಲಾಖಾ ಅಧಿಕಾರಿಗಳು ಎಚ್ಚರವಹಿಸಬೇಕು. ಅಪರಾಧಗಳನ್ನು ತಡೆಗಟ್ಟುವ ಸಲುವಾಗಿ ಇಲಾಖೆಯೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ತಿಳಿಸಿದರು.
ತಾಲೂಕಿನ ಗೌನಿಪಲ್ಲಿ ಗ್ರಾಮದ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್ಎಲ್ವಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಕಾರ್ಯಚಟುವಟಿಕೆಗಳ ಬಗ್ಗೆ ಹಾಗೂ ಜನ ಸಾಮಾನ್ಯರಿಗೆ ಎದುರಾಗುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಜನ ಸಂಪರ್ಕ ಸಭೆ ಏರ್ಪಡಿಸಲಾಗಿದೆ ಎಂದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗಡಿ ಮುಂಗಟ್ಟುಗಳಲ್ಲಿ ಹಾಗೂ ಮನೆಗಳ ಹತ್ತಿರದಲ್ಲಿ ಸಿಸಿ ಕ್ಯಾಮರಾ ಅಳವಡಿಕೆಯಿಂದ ಭದ್ರತೆಯ ವಾತಾವರಣ ನಿಮಾರ್ಣವಾಗುತ್ತದೆ. ಇನ್ನು ಸಿವಿಲ್ ಪ್ರಕರಣಗಳಲ್ಲಿ ಪೊಲೀಸರು ಯಾವುದೇ ನೈಜ ಜವಾಬ್ದಾರಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ. ನ್ಯಾಯಾಲಯದ ಆದೇಶದಂತೆ ಪೊಲೀಸ್ ಇಲಾಖೆ ಕಾರ್ಯನಿರ್ವಾಹಿಸಬೇಕಾಗುತ್ತದೆ. ಜನ ಸಾಮಾನ್ಯರು ಸಿವಿಲ್ ಪ್ರಕರಣಗಳಲ್ಲಿ ಪೊಲೀಸರಿಗೆ ಒತ್ತಡ ಹೇರುವ ಬದಲು ನ್ಯಾಯಾಲಯ ಅಥವಾ ಹಿರಿಯ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳುವ ಕೆಲಸ ಮಾಡಬೇಕು ಹಾಗೂ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಿದರು.
ಗೌನಿಪಲ್ಲಿ ಠಾಣಾ ವ್ಯಾಪ್ತಿಯಲ್ಲಿ ಕೆಲವು ಕೆಟ್ಟ ಗಳಿಗೆಯಲ್ಲಿ ಅವಡವಾಗಿರಬಹುದು, ಅಂತಹವರನ್ನ ರೌಡಿ ಶೀಟರ್ಗಳನ್ನು ರೌಡಿ ಶೀಟರ್ಗಳ ಪಟ್ಟಿಯಿಂದ ಹೊರತೆಗೆಯಲು ಸಾರ್ವಜನಿಕರು ಮನವಿ ಮಾಡಿದರು. ಸಾರ್ವಜನಿಕರ ಅಹವಾಲನ್ನು ಕೇಳಿ ನ್ಯಾಯಾಲಯದ ಆದೇಶದಂತೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದರು.
ಮುಖಂಡರಾದ ರಾಮಮೋಹನ, ಸತ್ಯನಾರಾಯಣ , ಗ್ರಾಪಂ ಬಕ್ಷುಸಾಬ್, ರಾಮಮೂರ್ತಿ, ವಿಶ್ವನಾಥ್, ಮಧು, ನಾಗೇಶ್, ರಮೇಶ್, ಚುಕ್ಕಾ ಮಂಜು, ಮುನಿರಾಜು ಇತರರು ಇದ್ದರು.