ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಡಿಐಜಿಪಿ ತಾಕೀತು

CTD DIGP ....
Published on

ಚಿತ್ರದುರ್ಗ: ನಾಪತ್ತೆ ಪ್ರಕರಣಗಳೆಡೆ ತೀವ್ರ ನಿಗಾ ವಹಿಸಿ ಕಾಣೆಯಾದವರ ಪತ್ತೆಗೆ ಕ್ರಮ ವಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ದಾವಣಗೆರೆ ಪೂರ್ವ ವಲಯ ಡಿಐಜಿಪಿ ರಮೇಶ್ ಬಾನೋಟ್ ಸೂಚಿಸಿದರು.
ಡಿಐಜಿಪಿಯಾಗಿ ಅಧಿಕಾರ ವಹಿಸಿಕೊಂಡ ಬಳಿ ಮೊದಲ ಬಾರಿಗೆ, ಚಿತ್ರದುರ್ಗ ಜಿಲ್ಲಾ ರಕ್ಷಣಾಧಿಕಾರಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಮಿಸ್ಸಿಂಗ್ ಕೇಸ್‌ಗಳೆಂಬ ಉದಾಸೀನ ಬೇಡ. ಮಹಿಳೆಯರು, ಮಕ್ಕಳ ನಾಪತ್ತೆಯಂಥ ಪ್ರಕರಣಗಳೆಡೆ ವಿಶೇಷ ನಿಗಾ ವಹಿಸಬೇಕು. ನಾಪತ್ತೆಯಾದ ಮಹಿಳೆಯರು, ಮಕ್ಕಳ ಪರಿಸ್ಥಿತಿ ಮುಂದೆ ಏನಾಗುತ್ತದೆ ಎಂಬುದನ್ನು ಊಹಿಸಲಾಗದು. ನಾಪತ್ತೆಯಾದವರಲ್ಲಿ ಒಬ್ಬರು ಸಂಕಷ್ಟಕ್ಕೆ ಸಿಲುಕಿದರೂ ಅದರ ನೈತಿಕ ಹೊಣೆ ಹೊತ್ತುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಅವರು, ಕೊಲೆ, ಸುಲಿಗೆ, ಕಳ್ಳತನ ಮೊದಲಾದ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಬೇಕು. ಜಿಲ್ಲೆಯಲ್ಲಿ ರಾತ್ರಿ ಮತ್ತು ಗ್ರಾಮ ಗಸ್ತು ಚುರುಕಗೊಳಿಸಬೇಕು. ಇ-ಬೀಟ್ ಹೆಸರಲ್ಲಿ ಸಸ್ಥಳಕ್ಕೆ ಹಾಜರಾಗಿ ಮರಳಿದರೆ ಪ್ರಯೋಜನವಾಗದು. ಗಸ್ತು ವಿಚಾರದಲ್ಲಿ ಉದಾಸೀನ ಬೇಡ. ಫೂಟ್ ಪೆಟ್ರೋಲಿಂಗ್ ಹೆಚ್ಚಾಗಬೇಕು. ಅನುಮಾನಾಸ್ಪದ ವ್ಯಕ್ತಿ, ವಾಹನಗಳನ್ನು ಪರಿಶೀಲಿಸಬೇಕು. ಮಾದಕ ವಸ್ತುಗಳ ಜಾಲದ ಮೇಲೂ ಹದ್ದಿನ ಕಣ್ಣಿಡಬೇಕು ಎಂದರು.
ಅಪಘಾತಗಳನ್ನು ನಿಯಂತ್ರಿಸಲು ಕ್ರಮ ತೆಗೆದುಕೊಳ್ಳಬೇಕು. ಅಧಿಕಾರಿಗಳು ಗ್ರಾಮಗಳಿಗೆ ಕಾಲ, ಕಾಲಕ್ಕೆ ತೆರಳಿ ಜನರೊಂದಿಗೆ ಚರ್ಚಿಸಬೇಕು. ಇನ್ಸ್‌ಪೆಕ್ಟರ್ ಹಾಗೂ ಡಿವೈಎಸ್ಪಿಗಳು ವಾರಕ್ಕೆ ಕನಿಷ್ಠ 2 ಠಾಣೆಗಳಿಗೆ ಭೇಟಿ ಕೊಡಬೇಕು. ಠಾಣೆಗಳು ಸ್ವಚ್ಛವಾಗಿರಬೇಕು. ಹೆಚ್ಚಿನ ಅವಧಿ ಸಮವಸ್ತ್ರ ಧರಿಸಿಯೇ ಕರ್ತವ್ಯ ನಿರ್ವಹಿಸಬೇಕು. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಬೇಕು ಎಂದು ತಿಳಿಸಿದರು.
ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು ಕಂಡು ಬಂದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿ, ಸಿಬ್ಬಂದಿಗೆ ಖಡಕ್ ವಾರ್ನಿಂಗ್ ನೀಡಿದ ರಮೇಶ್, ಚಿತ್ರದುರ್ಗ ಜಿಲ್ಲೆ, ಎಸ್‌ಸಿ, ಎಸ್‌ಟಿ ಸಮುದಾಯದವರು ಸೇರಿ ಬಡವರು ಅಧಿಕ ಸಂಖ್ಯೆಯಲ್ಲಿದ್ದು, ನೊಂದವರ ನೆರವಿಗೆ ಧಾವಿಸುವುದು ನಮ್ಮ ಕರ್ತವ್ಯ ಎಂದರು.
ಎಸ್‌ಸಿ, ಎಸ್‌ಟಿ ಸಮುದಾಯದವರೊಂದಿಗೆ ನಡೆಸುವ ಸಭೆಗಳನ್ನು ಠಾಣೆಗಳ ಬದಲು ಗ್ರಾಮಗಳಲ್ಲಿ ನಡೆಸಬೇಕು. ಠಾಣೆಗಳಿಗೆ ಬರುವಂಥ ದೂರುದಾರರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಸೂಚಿಸಿದರು.
ಎಸ್‌ಪಿ ಧರ್ಮೆಂದರ್‌ಕುಮಾರ್‌ಮೀನಾ, ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ, ಡಿವೈಎಸ್‌ಪಿಗಳಾದ ಚೈತ್ರಾ, ರಾಜಪ್ಪ, ಪಿ.ಕೆ.ದಿನಕರ್, ಡಿಎಆರ್ ಡಿವೈಎಸ್‌ಪಿ ಗಣೇಶ್ ಮತ್ತಿತರ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net