

ನಾಗಮಂಗಲ: ರಾಜ್ಯ ಹಾಗೂ ರಾಷ್ಟ್ರದಲ್ಲಿ ಯುವ ಸಮೂಹದಿಂದಲೇ ಅಪರಾಧಗಳು ಹೆಚ್ಚಾಗುತ್ತಿವೆ. ಅಪರಾಧ ಪ್ರಕರಣಗಳ ತಡೆಗೆ ಯುವಸಮೂಹದ ಸಹಕಾರ ಅಗತ್ಯವಾಗಿದ್ದು, ಪೊಲೀಸ್ ಇಲಾಖೆ ಜತೆ ಕೈಜೋಡಿಸಬೇಕಿದೆ ಎಂದು ಡಿವೈಎಸ್ಪಿ ಲಕ್ಷ್ಮೀ ನಾರಾಯಣಪ್ರಸಾದ್ ಹೇಳಿದರು.
ಪಟ್ಟಣದ ಆದಿಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಶನಿವಾರ ಆಯೋಜಿಸಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಾರ್ವಜನಿಕರು ಹಾಗೂ ಪೊಲೀಸರ ನಡುವೆ ಉತ್ತಮ ಬಾಂಧವ್ಯವಿರಬೇಕು. ಆದರೆ, ಇಂದು ಪೊಲೀಸ್ ಇಲಾಖೆಯನ್ನು ದೂರುವವರೇ ಹೆಚ್ಚಾಗಿದ್ದು, ಪೊಲೀಸರೊಂದಿಗೆ ಮಾಹಿತಿ ಹಂಚಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಮಾಹಿತಿ ನೀಡಿದರೆ ತೊಂದರೆಗೆ ನಾವು ಗುರಿಯಾಗಬಹುದೇನೊ ಎಂಬ ತಪ್ಪು ಭಾವನೆ ಬಹುತೇಕರಲ್ಲಿದೆ ಎಂದರು.
ಪಟ್ಟಣ ಠಾಣೆ ಪಿಎಸ್‌ಐ ರವಿಶಂಕರ್ ಮಾತನಾಡಿದರು. ಉಪನ್ಯಾಸಕರಾದ ರವಿಕುಮಾರ್, ತ್ರಿವೇಣಿ, ದೇವಾನಂದ್, ಪೊಲೀಸ್ ಸಿಬ್ಬಂದಿ ಅರುಣ್‌ಕುಮಾರ್, ರಮೇಶ್ ಇದ್ದರು.