ಅಪರಾಧಿಗಳ ಬಿಡುಗಡೆಯನ್ನು ವಿರೋಧಿಸಿ ಪ್ರತಿಭಟನೆ

DHALITH Sangh- protest (48)
Published on


ಹಾಸನ: ಗುಜರಾತ್ ಸಾಮೂಹಿಕ ನರಮೇಧದ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಎಂಬ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಅಕೆಯ ಕಣ್ಣೆದುರೇ ಆಕೆಯ ಪುಟ್ಟ ಮಗು ಮತ್ತು ಕುಟುಂಬದವರನ್ನು ಅತ್ಯಂತ ದಾರುಣವಾಗಿ ಹತ್ಯೆ ಮಾಡಿದ್ದ ಅಪರಾಧಿಗಳನ್ನು ಬಿಡುಗಡೆ ಮಾಡಿರುವ ಗುಜರಾತ್ ಸರ್ಕಾರದ ಕ್ರಮ ಖಂಡಿಸಿ ದಲಿತ ಮತ್ತು ಜನಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಹೀನಕೃತ್ಯ ಎಸಗಿದ್ದ ಅಪರಾಧಿಗಳನ್ನು ಶಿಕ್ಷೆ ಅವಧಿ ಮುಗಿಯುವ ಮುನ್ನವೇ ಸನ್ನಡತೆ ಆಧಾರದಲ್ಲಿ ಗುಜರಾತ್ ಸರ್ಕಾರ ಬಿಡುಗಡೆ ಮಾಡಿದೆ. ದೇಶದ ನ್ಯಾಯ ವ್ಯವಸ್ಥೆಯನ್ನೇ ಅವಹೇಳನ ಮಾಡಿರುವ ಗುಜರಾತ್ ಸರ್ಕಾರದ ಕ್ರಮ ಅತ್ಯಂತ ಖಂಡನೀಯ. ಈ ಘಟನೆಯಿಂದಾಗಿ ಜಾಗತಿಕ ಮಟ್ಟದಲ್ಲಿ ಭಾರತ ತಲೆತಗ್ಗಿಸಿ ನಿಲ್ಲಬೇಕಾಗಿ ಬಂದಿದೆ. ನ್ಯಾಯಕ್ಕಾಗಿ ಸುದೀರ್ಘ ಕಾನೂನು ಹೋರಾಟ ನಡೆಸಿದ್ದ ಗುಜರಾತಿನ ಸಂತ್ರಸ್ತ ಮಹಿಳೆ ಬಿಲ್ಕಿಸ್ ಬಾನು ಪರವಾಗಿ ಇಡೀ ದೇಶವೇ ನಿಲ್ಲಬೇಕು. ಸಾಮೂಹಿಕ ಅತ್ಯಾಚಾರ ನಡೆಸಿದ ದುಷ್ಟರನ್ನು ಮತ್ತೆ ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.

ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಹೊತ್ತು ಬಂಧಿನಕ್ಕೊಳಗಾಗಿರುವ ಮುರುಘಾ ಶರಣರ ಪ್ರಕರಣದ ವಿಚಾರಣೆಯನ್ನು ರಾಜ್ಯ ಉಚ್ಚ ನ್ಯಾಯಾಲಯದ ನೇತೃತ್ವದಲ್ಲಿ ನಡೆಸಬೇಕು. ದೌರ್ಜನ್ಯಕ್ಕೊಳಗಾದ ಬಾಲಕಿಯರು ಮತ್ತು ಅವರ ಕುಟುಂಬಗಳಿಗೆ ಸೂಕ್ತ ರಕ್ಷಣೆ ಮತ್ತು ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಒಕ್ಕೂಟದ ಮುಖಂಡ ಎಚ್.ಕೆ. ಸಂದೇಶ್, ಎಸ್.ಎನ್. ಮಲ್ಲಪ್ಪ, ಎಂ. ಸೋಮಶೇಖರ್, ಈರೇಶ್ ಹಿರೇಹಳ್ಳಿ, ಹೆತ್ತೂರು ನಾಗರಾಜ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್, ಸಾಹಿತಿ ರೂಪಾ ಹಾಸನ, ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಎಚ್.ಆರ್. ನವೀನ್‌ಕುಮಾರ್, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಪೃಥ್ವಿ ಮತ್ತಿತರರು ಹಾಜರಿದ್ದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net